Saturday, December 14, 2019

ಕವಿತೆ: ಕನಸು

              ಕನಸು

ಕನಸು ಕಾಣುವ ಕನಸು, ಕನಸು ಕಾಡುವ ಕನಸು
ನಿತ್ಯ ಬಗೆಬಗೆ ಕನಸು, ಭಿನ್ನ ಭಿನ್ನವು ಮನಸು

ಕನಸು ಕಟ್ಟುವವರಾರೊ, ಕನಸು ಕೆಡಹುವವರಾರೊ
ಕಟ್ಟಲಾಗದವರಾರೊ, ಕೆಡವಲಾರದವರಾರೊ
ಕಟ್ಟಿ ಕೆಡಹುವ, ಕೆಡುಹಿ ಕಟ್ಟುವ, ಮತ್ತಾರೊ
ಭಿನ್ನ ಭಿನ್ನವು ಮನಸು, ಹೀಗೆ ಬಾಳಿನ ಬಳಸು!

ಬಯಕೆ ಬತ್ತದ ಕನಸು, ಕಿಚ್ಚು ಆರದ ಕನಸು
ಕುರುಡು ಕತ್ತಲೆ ಕನಸು, ಬರಡು ಬೆತ್ತಲೆ ಕನಸು
ನೇಹ ಚೈತ್ರದ ಕನಸು, ಭೀತಿ ಘ್ರೀಷ್ಮದ ಕನಸು
ಪ್ರೀತಿ ಶ್ರಾವಣ ಕನಸು, ಮೋಹ ಮಾಘಿಯ ಕನಸು

ಬಾಳ ಸಂತೆಯ ತುಂಬ, ಮನದ ಬುತ್ತಿಯ ತುಂಬ
ಕಾಡು ಕಣಿವೆಯ ಕನಸು, ಒಡಲು ಕಡಲಿನ ಕನಸು
ಗಗನದಾಚೆಯ ಕನಸು, ಬಣ್ಣ ಬಣ್ಣದ ಕನಸು
ಎಲ್ಲೆ ಇಲ್ಲದ ಕನಸು, ’ಎಲ್ಲೆ’ಏ ಇದ್ದರೂ ಕನಸು!


ರಚನೆ - ಸಂತೋಷ್
ತಾರೀಖು -  ? (ಮೇ ೨೦೧೪)

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...