Tuesday, June 21, 2022

ನನ್ನ ಅಮ್ಮಪುಟ್ಟ

ನನ್ನ ಅಮ್ಮಪುಟ್ಟ


ಪುಟ್ಟ ಕಂದ ನಿನ್ನ ಎತ್ತಿ, 

ಕೆನ್ನೆಗೆ ಸಿಹಿ‌ಮುತ್ತನೊತ್ತಿ, 

ರಮಿಸಿ, ನಲಿಸಿ, ತಣಿಸಲಿಲ್ಲ

ಅಪ್ಪಿ ಎದೆಗೆ ಮಲಗಿಸಿಲ್ಲ!


ನೊರೆಯ ಹಾಲು ತಂದು ಕುಡಿಸಿ

ಪ್ರೀತಿ ಬೆರೆಸಿ ತುತ್ತು ತಿನಿಸಿ 

ಬೆಳೆವ ಹಸುಳೆ ಪೊರೆಯಲಿಲ್ಲ

ಪುಷ್ಟಿ, ಶಕ್ತಿ ನೀಡಲಿಲ್ಲ!


ಮೊದಲ ನಡೆಗೆ ಬೆರಳು ಹಿಡಿದು

ತೊದಲು ನುಡಿಗೆ ನೆಟಿಗೆ ಮುರಿದು

ನಡೆಸಿ, ನುಡಿಸಿ, ನಗಿಸಲಿಲ್ಲ

ಬಿದ್ದು ಎದ್ದು ಕುಣಿಸಲಿಲ್ಲ!


ಬೆಳಗಿನಲ್ಲಿ ಮೊಗವ ತೊಳೆದು

ಜೊತೆಗೆ ಸೇರಿ ಸೊಗವನೆರೆದು

ಅಭ್ಯಂಜನ ಮಾಡಿಸಿಲ್ಲ

ಜಳಕವಾಡಿ ಪೀಡಿಸಿಲ್ಲ!


ಅಂದವಾದ ಉಡುಗೆ ಉಡಿಸಿ 

ಹೂವು ಮುಡಿಸಿ, ಒಡವೆ ತೊಡಿಸಿ

ಸಿಂಗಾರವ ಮಾಡಲಿಲ್ಲ

ಸೌಂದರ್ಯವ ಮೆರೆಸಲಿಲ್ಲ!


ಕಣ್ಣಾಮುಚ್ಚಾಲೆ ಆಡಿ

ಭುಜದಿ ಇರಿಸಿ ಮೆರೆಸಿ ಓಡಿ

ಕೂಗಿ ಕೇಕೆ ಹಾಕಲಿಲ್ಲ

ತೂಗಿ ಪದವ ಹಾಡಲಿಲ್ಲ!

 

ಸಂಜೆ ಬರಲು ಒಡನೆ ಕೂಡಿ

ಕೆಳೆಯರೊಡನೆ ಆಟವಾಡಿ

ಬಾಲ ಲೀಲೆ ಬೆಳೆಸಲಿಲ್ಲ

ತುಂಟತನವ ಮೆರೆಸಲಿಲ್ಲ!


ಅಮ್ಮನನ್ನು ಪೂಸಿ ಮಾಡಿ

ಅಪ್ಪನನ್ನು ಕಾಡಿ ಬೇಡಿ

ಊರು, ಜಾತ್ರೆ ಸುತ್ತಲಿಲ್ಲ

ಬೇಕು, ಬೇಡ ಎನ್ನಲಿಲ್ಲ

   

ಓದು ಬರಹ ಕಲಿಕೆ ಕೋರಿ 

ಮುಂದೆ ಸಾಗಿ ಮಾರ್ಗ ತೋರಿ

ಹಿರಿಯನೆನಿಸಿ ಹರಸಲಿಲ್ಲ

ತಿದ್ದಿ ತೀಡಿ ಸಲಹಲಿಲ್ಲ!


ಲಲಿತ ಕಲೆಯ ಲೋಕ ತೆರೆಸಿ

ಗಾನ, ನಾಟ್ಯ ವಿದ್ಯೆ ಕಲಿಸಿ

ಸರಸ ಸುಧೆಯ ಹರಿಸಲಿಲ್ಲ

ದಿವ್ಯ ಸೃಷ್ಟಿ ತೋರಲಿಲ್ಲ!  

 


************************


ಬೆಳೆದು ತರಳೆ ಹಟವ ಹಿಡಿಯೆ

ಕೋಪ ಜಗಳ ಆಟ ಹೆಣೆಯೆ

ಶಾಂತಿ ತಳೆದು ತಣಿಸಲಿಲ್ಲ

ಕೋಪ ಶಮನ ಮಾಡಲಿಲ್ಲ! 


**************************

ಹರಯ ಮೂಡಿ ಬಯಕೆ ಮೊಳೆಯೆ

ಹೃದಯ ತುಂಬಿ ಪ್ರೀತಿ ಬಲಿಯೆ

ಮಿಡಿದ ದನಿಯ ಕೇಳಲಿಲ್ಲ

ಸ್ನೇಹ ತೋರಿ ನಡೆಸಲಿಲ್ಲ!


***************************


ಯಾರ ಜೊತೆಗೆ ಮದುವೆ ಬೆಸುಗೆ

ಬಾಳ ಬೆಳಗೊ ಭವ್ಯ ಒಸಗೆ 

ಮುಂದೆ ನಿಂತು ಹುಡುಕಲಿಲ್ಲ

ತಪ್ಪು‌ ಸರಿಯ ತಿಳಿಸಲಿಲ್ಲ!


**************************


ಎಲ್ಲೋ ನಾನು ಎಲ್ಲೋ ನೀನು

ಇದ್ದೆವಾಗ ತಿಳಿಯದೇನೆ

ಇಂದೆಲ್ಲಿರೆ ಒಂದು ನಾವು

ತಿಳಿದ‌ ಮೇಲೆ ತಿಳಿಸದೇನೆ!


ಎಂಥ ಸ್ನೇಹ ಏನು ಪ್ರೀತಿ

ಏನು ಸಾಮ್ಯ, ಎಂಥ ಸ್ವಾಮ್ಯ

ಹೇಗೊ ಹಾಗೆ, ಹೇಗೆ ಹೀಗೆ?! 

ಅಣ್ಣ ತಂಗಿ ಇರುವ ಹಾಗೆ!


ಯಾರ ದೃಷ್ಟಿ ತಟ್ಟದಿರಲಿ

ಯಾವ ಅಡ್ಡಿ ಬಾರದಿರಲಿ

ಒಲವ ಚೆಲುವು ಸುಖವ ತರಲಿ

ನಲವು ಗೆಲವು ತುಂಬಿ ನಗಲಿ


ರಕ್ತ ಹಂಚಿಕೊಂಡು‌ ನಾವು

ಹುಟ್ಟಲಿಲ್ಲ ಆದರೇನು?!

ಕೂಡಿ ಕಳೆವ ಸವಿಯ ಸೊಗಸು

ಮುಂದೆ ನಮಗೆ ದೊರೆಯದೇನು?!


ರಚನೆ: ಸಂತ (ಸ.ಗು ಸಂತೋಷ್)

ತಾರೀಖು: ೦೩/೦೭/೨೨


ಪ್ರೇರಣೆ: 

ನನ್ನ ಜೀವನದಲ್ಲಿನ ಅಪೂರ್ವ ಕ್ಷಣಗಳಲ್ಲಿ ಒಂದು ನನ್ನ ಬಾಳಿನಲ್ಲಿ ನನ್ನ ಮುದ್ದಿನ ತಂಗಿಯ ಆಗಮನ😊... 

ನನಗೆ ತಂಗಿ ಇದ್ದಾಳೆಯೆ ಎಂದು ಆಶ್ಚರ್ಯ ಪಡದಿರಿ... 

ಇವಳು ರಕ್ತ ಹಂಚಿಕೊಂಡು ಈ ಜನ್ಮದಲ್ಲಿ ನನಗೆ ಅನುಜೆಯಾಗಿ ಬಂದಿಲ್ಲ. 

ಜನ್ಮಜನ್ಮಾಂತರದ ಬೆಸುಗೆಯ ಸಂಕೇತವಾಗಿ, ಗೆಳೆಯನ ಅರ್ಧಾಂಗಿಯಾಗಿ, ನನ್ನರಸಿಯ ನೆಚ್ಚಿನ ಗೆಳತಿಯಾಗಿ, ನಂತರ ನನ್ನ ಮುದ್ದಿನ, ಅಚ್ಚುಮೆಚ್ಚಿನ ಸೋದರಿಯಾಗಿ ಜೀವನದಲ್ಲಿ ಪ್ರವೇಶಿಸಿದ್ದಾಳೆ... ನನ್ನ ಅಮ್ಮಪುಟ್ಟ ಇವಳು❤️

ತಂಗಿಯ ಒಡಲಾಗಿ, ಮಮತೆಯ ಕಡಲಾಗಿ ನನ್ನ ಬಾಳನ್ನು ಸೇರಿರುವ ಇವಳೆಂದರೆ ನನಗೆ ಪ್ರೀತಿ, ಆದರ, ಸಲಿಗೆ ಎಲ್ಲವೂ ಅಪಾರ! ಅವಳಿಗೂ ಅಷ್ಟೆ! ತಿಳಿಸದೆ ಎಲ್ಲಾ ತಿಳಿದುಬಿಡುತ್ತೆ🙏

ಇವಳು ಹುಟ್ಟಿದ ಅಮೃತ ಘಳಿಗೆಯಲ್ಲಿ, ನಾನು ಅಣ್ಣನಾಗಿದ್ದು ಅವಳ ಬದುಕು ರೂಪುಗೊಂಡ ಪ್ರತಿ ಹಂತದಲ್ಲಿ ನಾನೇಕೆ ಜೊತೆಯಲ್ಲಿ ಇರಲಾಗಲಿಲ್ಲ, ಅವಳ ಬದುಕಿನ ಚೆಲುವಿನ ಚಿತ್ತಾರಕೆ ಬಗೆಬಗೆಯ ಸುಂದರ ಬಣ್ಣಗಳನ್ನು ತುಂಬಲು ಆಗಲಿಲ್ಲ ಎಂದು ಮನಸು ಅನೇಕ ಬಾರಿ, ಅನೇಕ ರೀತಿಯಲ್ಲಿ ದುಃಖಿಸುವುದು ಸತ್ಯ. 

ಆದರೆ ದೈವಾನುಗ್ರಹವಿದ್ದಲ್ಲಿ ಅದರ‌ ರಸಾನುಭವ ನಮಗೆ ಭವಿಷ್ಯದಲ್ಲಿ ದೊರೆಯಬಹುದು‌ ಎಂಬ ಗಟ್ಟಿ ನಂಬಿಕೆ ಇದೆ. 

ಇದೆಲ್ಲದರ ಭಾವಭಿವ್ಯಕ್ತಿಯೇ ಈ ಕವನ... 


ಶ್ರೀವಿದ್ಯಾಧಿದೇವಿಗೆ ನಮೋ ನಮೋ🙏😊

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...