Saturday, July 2, 2022

ಭೂಕೈಲಾಸ

 ನಮಸ್ಕಾರ ಗುರು, 


ಈ ಕೆಳಗಿನ "ಭೂಕೈಲಾಸ" ಕವನವನ್ನು ನಿನಗೆ ಮತ್ತು ನಿತ್ಯಗೆ ನಿಮ್ಮ ಫ಼ಿನ್‌ಲ್ಯಾಂಡ್ ದೇಶದ ಪ್ರವಾಸದ ವಿಜಯೋತ್ಸವದ ಸ್ಮರಣಿಕೆಯಾಗಿ, ಅಭಿನಂದನೆಗಳನ್ನು ಸಲ್ಲಿಸಿ ಅರ್ಪಿಸುತ್ತಿರುವೆ☺️🙏


ಭೂಕೈಲಾಸ


ವಳಕ್ಷಾಚ್ಛಾದಿತ, ವಿಧಾತ ವಿರಚಿತ, ವಿಲಾಸ ವಿಕಸಿತ

ವಿಶ್ವಂಭರೆಯಲಿ, ವಿಶ್ವಾಂಬರದಲಿ, ವಿಭವದಿ ವಿಕ್ರಮ ವೀಕ್ಷೆ!

ದವಳಾರಾರ್ಚಿತ ದಿಕ್ತಟ ದಿಬ್ಬಣ, ದೈವಿಕ ದರ್ಶನ 

ದಿವ್ಯಾಂತರದೊಳು ದಿಗ್ದರ್ಶನವೆನೆ ದೇಶಿಕ ದೇಹಿಗೆ ದೀಕ್ಷೆ!


ಹಿಮಮಲೆ ಧಾರಿಣಿ ಪ್ರಕೃತಿ ಪರ್ವಣಿ ಅಸದಳ ಪವಣಿಗೆ ಶ್ರೀಕಾರ

ಸುಂದರ, ಕೋಮಲ, ನಿರ್ಮಲ, ಶೀತಲ ವಿಸ್ಮಯ ಲೋಕದಿ ಸಂಚಾರ!

ಷೋಡಶ ಹರಯದ ಉಕ್ಕುವ ಪ್ರಣಯದ ಚಂಚಲ ಚಿತ್ತಕೆ ಪ್ರಾಕಾರ!

ಮಾನಸ ಮಂದಿರ ದೀವಿಗೆ ಬೆಳಗಿಸಿ ಮುಕ್ತಿಯ ಮಾರ್ಗಕೆ ಆಕಾರ!


ರವಿ-ಶಶಿ ತೋರದ ಶ್ಯಾಮಲಾಗಸದಿ ತಾರಾ ಮಂಡಲ ಸಿಂಗಾರ

ನಭದೊಳು ಮಿರಿಮಿರಿ ಮಿನುಗುತ ತೇಲುತ, ಬೆಳ್ನಗೆ, ಬೆಳ್ಸರಿ, ಮಂದಾರ! 

ತುಹಿನದ ಬಿಳ್ಪೊಳು ಮಿಂದಿರೆ ಭೂರಮೆ, ನಿಚ್ಚಳ ನಿಬ್ಬಣ ಶೃಂಗಾರ

ಸಲೆಚಳಿ ಮಾರುತ, ಮಂಜಿನ ದೂಮರ, ಕಣಕಣ ರಿಂಗಣದೋಂಕಾರ!


ಪ್ರಶಾಂತ ಮಂತಣ ನೀರ್ಗಲ್ಲಿನೆಡೆ ಅನುಭವ ದರ್ಶನ ಸಾಕ್ಷಾತ್ಕಾರ!

ಸುಶಾಂತ ಸೃಷ್ಟಿಗೆ ವಿಕಸಿಸಿ ಹೃನ್ಮನ ಪಂಚೇಂದ್ರಿಯಗಳ ಸಂಸ್ಕಾರ!

ಅಂತರ್ಯಾಮಿಯ ಅಮೋಘ ಲೀಲೆಗೆ ನೀರವ ಮೌನದ ಠೇಂಕಾರ!!

ಅಂತರಂಗದಿ ಅಮೃತ ಚೇತನ, ದಿವ್ಯ ಸ್ಮರಣೆಯ ಸ್ವೀಕಾರ!


ರಚನೆ: "ಸಂತ" (ಸ.ಗು ಸಂತೋಷ್)

ತಾರೀಖು: ೨೧/೦೧/೨೦೨೨


ಪ್ರೇರಣೆ: 

ವರ್ಷ ೨೦೨೨ರ ಮೊದಲ ದಿನ ನನ್ನ ಆತ್ಮೀಯ ಗುರು ಅಗಣಿತ ತಾರಾಗಣಗಳ ಪಕ್ಷಿನೋಟದ ಭಾವಚಿತ್ರದೊಂದಿಗೆ ಶುರುಮಾಡಿ, ಫ಼ಿನ್‌ಲ್ಯಾಂಡಿನ ಸಾರಿಸೆಲ್ಕದ ವಿಸ್ಮಯ ಜಗತ್ತಿನಲ್ಲಿ ನಿತ್ಯ, ಗುರುದತ್ ದಂಪತಿಗಳು ನಿಸರ್ಗ ಸವಿಯ (ಶೀತವಲಯದಿ) ತೊದಲು ನುಡಿಗಳನ್ನು ಬರಹವಾಗಿಸಿ ಸಾಗುತ್ತ ಪ್ರಕೃತಿಯ ಸ್ನಿಗ್ಧ ಸೊಬಗು ಹೆಚ್ಚಿದಂತೆಲ್ಲ ದೇಹ ಭಾರವಾದರೂ ಮನಸು ಹಗುರಾಗಿ, ಭಾವನೆಗಳು ಗರಿಗೆದರಿ ಸ್ವಚ್ಛಂದವಾಗಿ ಚಿಮ್ಮಿ ಬೆಳೆದು ಲ್ಯಾಪ್‌ಲ್ಯಾಂಡಿನಲ್ಲಿ ಪ್ರವಾಸಕಥನಮಾಲಿಕೆಯಾಗಿ "ಅಡಿಯಿಂದ ಮುಡಿಯವರೆಗೆ", "ಸೂರ್ಯಂಗೆ ಟಾರ್ಚ್!" ಹಾಗೂ "ಹಿಮದ ಮೇಲೆ ಚಾರಣ"ಗಳ ರೂಪ ತೊಡಿಸಿ ಮಿತ್ರಬಳಗವನ್ನು ರಂಜಿಸಿದ್ದು, ದಿವ್ಯ ವಿಸ್ಮಯಲೋಕದ ದರ್ಶನ ಮಾಡಿಸಿದ್ದು, ಅಲ್ಲಿನ ನಿರ್ಮಲತೆ, ತೀವ್ರತೆಗಳ ಪರಿಕಲ್ಪನೆ ಮೂಡಿಸಿ ರೋಮಾಂಚನಗೊಳಿಸಿದ್ದು, ಪರಮಾತ್ಮನ ಲೀಲಾವಿನೋದಗಳ ಪರಿಚಯಿಸಿ ನಿಬ್ಬೆರಗುಗೊಳಿಸಿದ್ದು, ಇಂಜಿನಿಯರನೊಬ್ಬ ದಾಖಲಿಸುವ ಪರಿಗಿಂತ ಒಬ್ಬ ಕಬ್ಬಿಗನ ಕಾವ್ಯದ ಅಥವಾ ಚಿತ್ರಕಾರನ ಅಥವಾ ಚಿತ್ರಶಿಲ್ಪಿಯ ಕುಂಚದ ಭಾವ ದೀಪಿಕೆಯಲ್ಲಿ ಈ ಲೋಕದ ಸೊಗಸು ಹೇಗೆ ತೋರೀತು ಎಂದು ನುಡಿದು ಹುರಿದುಂಬಿಸಿದ್ದು, ನನ್ನ "ಭೂಕೈಲಾಸ" ಕವನಕ್ಕೆ ನಾಂದಿಯಾದವು!! 

ಗುರು, ನೀನು ಹಂಚಿಕೊಂಡ ದೃಶ್ಯಾವಳಿಗಳನ್ನು ಕಂಡ ನನ್ನನ್ನು ಹಿಮಾವೃತ ಇಳೆ, ಮಂಜಿನ ಮಳೆ, ಚುಕ್ಕಿ ಮುಚ್ಚಿದ ಬಾನು, ಭಕ್ತಿ ರಸಚೇತದ ಅಮೃತಧಾರೆ ಸಂಪೂರ್ಣವಾಗಿ ಆವರಿಸಿಬಿಟ್ಟವು!!! ಅದು ಈ ಕವನದಲ್ಲಿ ಪ್ರತಿಫಲಿಸಿದೆ. ಈ ಅನುಭವಾಮೃತವ ಉಣಬಡಿಸಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು ಗುರು🙏

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...