"ಸಂತನ ಚಿಂತೆ"
ಲೋಕದ ನಿಯತಿಯ ಮೇರೆಗಳನು ನೀ ಬೆದಕುವುದೇತಕೆ ಸಂತ?!
ಸೃಷ್ಟಿ ಲೀಲೆಯೆ ಹೀಗಿರುವಾಗ ಮತ್ತೇನನು ಹುಡುಕುವುದಂತ?!
|೧|
ಪಾಪ ಪುಣ್ಯಗಳ ಮೂಟೆಯ ಹೊತ್ತು ಬುವಿಗೆ ತಂದೆವೆ 'ನಾವು'?
'ಅವನ' ಸೂತ್ರದ ಗೊಂಬೆಗಳಾದೊಡೆ ಮೂಟೆಯ ತುಂಬಿಹರಾರು?
ಜನ್ಮನೀಡಿದ ಅಮ್ಮನ ಪ್ರೀತಿ ಮಕ್ಕಳಿಗೆಂದೂ ಒಂದೆ?
ಸತ್ಯವಿದೆಂದರೆ ಲೋಕಮಾತೆಯೆ, ಈಗಿನದೇನಿವು ಅಂಬೆ?!
|೧|
|೨|
ಹಸಿದ ಹೊಟ್ಟೆಗಳಿಗುಪವಾಸ, ಕಸಿದ ತಟ್ಟೆಗಳಲಾವಾಸ?!
'ಬಡವಗೊಲಿಯದ ಬಲ್ಲಿದ ಬಿಡದ' ಇದೆಯೆ ನೀತಿ 'ಶ್ರೀ'ನಿವಾಸ?!
'ದುಷ್ಟ ಶಿಕ್ಷಣ ಶಿಷ್ಟ ರಕ್ಷಣ' ನಂಬಿಹ ಮಾತಿರಲೇನು?
'ಅಂದಿರುವಂತಿಗೆ ಇಂದಿರಿವಂತಿದೆ' ಒಪ್ಪದೆ ಇರಬಹುದೇನು?
|೨|
|೩|
ನಂಬಿ ಕೆಟ್ಟವರಿಲ್ಲವೆನುತ ಈ ಪಯಣ ಸಾಗುತಲಿದ್ದೆಡೆ
ಒಳಿತು ಕೆಡಕಿಗೆ ಹೊಸತು ಭಾಷ್ಯವು ನುಸುಳಿ ಬಿಟ್ಟಿತೆ ಮೆಲ್ಲಗೆ?!
ಸ್ವರ್ಗ ನರಕದ ಮಾಯಾಲೋಕದ ಹಾದಿ, ಹರವದು ತಿಳಿವುದೆ
ಯಾರು ಯಾರಿಗೆ, ಯಾವುದೇತಕೆ ದಾರಿ, ಮಾದರಿ ತಿಳಿಯದೆ!
|೩|
|೪|
ಕಿತ್ತು ಕೊಡಿಸಿ, ಕೊಟ್ಟು ಕೆಡೆಸಿ, ಕೊಟ್ಟೂ ಕೊಡದ ಆಟವಿದೇನು?
ಒಲಿದುದಳಿಸಿ, ನಲವಲಳಿಸಿ, ಅಳುವಲಿರಿಸೊ ಅವನ ಸೂತ್ರವಿದೇನು?
ಅವನೆ ಮಾಡಿದ ಭವ್ಯ ಲೋಕವ ಕಂಡು ಬೀಗಿದ ಬೊಮ್ಮನು
ಸಾಕೆಂದೆನುತ ಮಸಣಮೌನದಿ ತನದೆಲ್ಲವ ಮುಗಿಸುವನೇನು?!
|೪|
ರಚನೆ: "ಸಂತ" ( ಸ.ಗು ಸಂತೋಷ್)
ತಾರೀಖು: ೧೯/೧೨/೨೦೨೨
No comments:
Post a Comment