ಮೈತ್ರಿಕೂಟ
ಏಕತಾನತೆಯ ನಿತ್ಯದ ಓಟಕೆ
ನೀಡುತ ನಾವು ಇನಿತು ವಿರಾಮ!
ದಿವ್ಯ ನಿಸರ್ಗದ ಮಡಿಲನು ಸೇರಲು
ರತ ಸಂಗೀತದಿ ಪೂರ್ಣಾರಾಮ!
ರಮ್ಯೋದ್ಯಾನದಿ ಅನುಪಮ ಚೆಲುವಲಿ
ನಗುತಿರೆ ಸುಮಗಳು, ಸೊಗಸು ನಿತಾಂತ!
ಬದುಕಿನ ಸಂತೆಯ ಅಗಣಿತ ಚಿಂತೆಯ
ಬದಿಗಿಡೆ ಮನಗಳು, ಒಳಗು ಸುಶಾಂತ!
ಗೆಳೆಯರ ಬಳಗದ ನಿರುಪಮ ಸ್ನೇಹವು
ಮಿಡಿಯಲು, ನುಡಿಯಲು ಮಧುರಾಲಾಪ!
ಸೋದರ ಸೋದರಿ ನಿರ್ಮಲ ಪ್ರೀತಿಯು
ಚಿಮ್ಮುತ ಹರಿಯಲು ಸರಸ ಸಲ್ಲಾಪ
ಸುಂದರ ಹೂಬನ ಚೆಲುವಿನ ಸೊಬಗಿಗೆ
ಅನುಪಮ ಮುಕುಟವೆ ಕೆಂಪು ಗುಲಾಬಿ!
ಅಸದಳ ಮೈತ್ರಿಯ ಸವಿರುಚಿ ಝೋಂಪಿಗೆ
ಹಸಿಬಿಸಿ ಕಲಹವೆ ಉಪ್ಪಿನ ಕಾಯಿ
ಬಾಲ್ಯದ ರೀತಿಗೆ, ಪ್ರಾಯದ ಗೀಳಿಗೆ
ಅವಿರತ ಸಂಭ್ರಮ, ಒಳಹೊರಗಾಟ!
ಮೊಗ ವಾಸಂತಿಕೆ! ಮಾತಿರುವಂತಿಗೆ!
ಸಂಪಿಗೆ, ಮಲ್ಲಿಗೆ ಸೊಗದೆರಚಾಟ!
ಮಳೆಯಲಿ ಜೊತೆಯಲಿ, ವನಸುಮ ಮಡಿಲಲಿ
ಮೈಮನ ತೋಯಿಸಿ ಸಂಭ್ರಮ ಕೂಟ!
ಹತ್ತುವ, ಇಳಿಯುವ, ಜೀಗುವ, ಜಿಗಿಯುವ
ಓಡುವ, ಜಾರುವ, ಪರಿಪರಿಯಾಟ!
ಎಲ್ಲೆಡೆ ವನಸಿರಿ, ಗಿರಿ-ದರಿ, ತೊರೆ-ಝರಿ
ಹತ್ತಿರದಲ್ಲಿಯೆ ಜೋಗದ ಭೋರ್ಗರೆ!
ಮೀಯುತ, ಕೂಗುತ, ಕುಣಿಕುಣಿದಾಡುತ
ಹರ್ಷೋಲ್ಲಾಸದಿ ಸಗ್ಗವೆ ಈ ಧರೆ!
ನಿತ್ಯದ ಕೋಟಲೆ, ಸಂಕಲೆ ಕಳಚುತ
ನಾಚಿಕೆ ಮಾಣಿಸಿ, ತನ್ನನು ಪ್ರೀತಿಸಿ,
ಕೂಡುತ, ಕಳೆಯುತ ಪ್ರತಿಕ್ಷಣ ಜೀವಿಸಿ
ಬಯಸಿದ, ಬೇಡಿದ ನಂದನ ಜೀವನ!
ಅಂದದ ಯಾನದ, ಚಂದದ ನೆನಪಿನ
ಮುತ್ತಿನ ಮಾಲೆಗೆ ಅಂತಿಮ ಪ್ರಸ್ತುತಿ!
ಹೊಯ್ಸಳ ಜಕಣರ ದೃಷ್ಟಿಯ, ಸೃಷ್ಟಿಯ
ಶಿಲ್ಪಾಲಯದ ಸನ್ನಿಧಿ, ಸನ್ನುತಿ!
ವಿಹಾರ ಮುಗಿಯುತ ಮರಳುವ ಆ ಕ್ಷಣ
ಕಂಗಳು ಹನಿಯುತ ತುಂಬಿತು ಹೃನ್ಮನ
ಹೀಗೆಯೆ ಸೇರುವ, ಅಲೆಯುವ ಎನ್ನುತ
ಹೊಸ ಕನ ಕಟ್ಟಲು ರಸ ರೋಮಾಂಚನ!
ರಚನೆ: "ಸಂತ" (ಸ.ಗು ಸಂತೋಷ್)
ತಾರೀಖು: ೨೯/೦೭/೨೨
ಪ್ರೇರಣೆ: ನಮ್ಮ ಸಕಲೇಶಪುರದ ಕಡೆಗಿನ ಪ್ರವಾಸ ... Streamedge Homestay ಹಾಗೂ ಬೇಲೂರು ೨೬/೦೫/೨೦೨೨ರಿಂದ ೨೮/೦೫/೨೦೨೨ರ ವರೆಗಿನ ಪ್ರವಾಸ
No comments:
Post a Comment