ಪರಸ್ಪರ
ನೆಮ್ಮದಿಯ ಅರಸಿ ಬರುತಿಹ ಮೊರೆವ ಅಲೆಗಳಿಗೆ ಕಡಲ ತಡಿಯಲಿ ಶಾಂತಿ!
ಕಲರವವ ಬಯಸಿ ಬಳಲಿಹ ನಿಶ್ಯಬ್ದ ತೀರಕೆ ಅಲೆಗಳುಬ್ಬರದಿ ಕಾಂತಿ!
ಸೃಷ್ಟಿಯ ನಿಯಮವಿದು, ಮೂಜಗದ ನಿಯತಿಯಿದು, ಎಲ್ಲಕಿದುವೆ ಉತ್ತರ
ನಡೆವೆನೆನೆ ಹತ್ತಿರ, ಬೆಳೆವೆನೆನೆ ಎತ್ತರ, ನಡುವೆ ಸೇತುವೆ 'ಪರಸ್ಪರ'!
ಚಂದನದ ಬನದಲ್ಲಿ, ದೊರೆತಿರುವ ಹೊಸಕ್ರಾಂತಿ ಪಥದಲ್ಲಿ
ಕಲೆ, ಕಾವ್ಯ ಹರುಗುತ್ತ, ಬೆಳೆ ಬೆಳೆದು ಹುಟ್ಟೆಡೆಯ ಪೊರೆಯುತಲಿ
ಕನ್ನಡದ ಝೇಂಕಾರ! ನುಡಿಮಿಡಿಸಿ ಮಾರ್ದನಿಸಿ ಸೈ ಎನ್ನಿ
ತಾಯ್ನಾಡ ಇನಿಸಿರಿಯ ಮೆರೆಸಿ ಪಸರಿಸುವ ಜೊತೆ ಬನ್ನಿ
ನಿರಭಿಮಾನದ ಶೃಂಖಲೆಯ ಕಿತ್ತೊಗೆದು, ಒಟ್ಟಾಗಿ, ಹಗುರಾಗಿ
ಸದಭಿಮಾನದ ಸಚ್ಚರಿತೆಗೋಗೊಟ್ಟು, ಕೈಹಿಡಿದು, ಹೊರನಡೆದು
ಸ್ನೇಹ ಸಂಕಲ್ಪ ತೊಟ್ಟೊಡನೆ, ನೆಮ್ಮಿ 'ಪರಸ್ಪರ'ಕೆ ಐತನ್ನಿ
ಚಿತ್ತ ಚಿತ್ತಾರದಲಿ ಸಂಭವಿಪ ಮನ್ವಂತರಕೆ ನೆಚ್ಚಿ ಜೈ ಎನ್ನಿ
ರಚನೆ: "ಸಂತ" (ಸ.ಗು ಸಂತೋಷ್)
ತಾರೀಖು: ೨೩/೧೨/೨೦೨೩
ಪ್ರೇರಣೆ: ಇದು ನಮ್ಮ 'ಪರಸ್ಪರ' ಪ್ರಯೋಗ ಹಾಗೂ ಪ್ರಯತ್ನದ ಸಂಕಲ್ಪ ಗೀತೆ... ಹದಿನೇಳೆಂಟು, ಕೋಳಿ ಎಸ್ರು ಚಿತ್ರತಂಡಗಳ ಪರಿಶ್ರಮಕ್ಕೆ ಅರ್ಪಣೆ.

No comments:
Post a Comment