Saturday, January 4, 2025

ಕವಿತೆ: ಹೋಹೆನ್‌ಜ಼ೋಲೆರ್ನ್


 "ಹೋಹೆನ್‌ಜ಼ೋಲೆರ್ನ್"


ವಸುಂಧರೆಗೆ ತೊಡಿಸಿರಲು ತುಹಿನಾಂಬರದ ಸಿಂಗಾರ 

ಕಂಗೊಳಿಸಿದೆ ನಡುವಿನಲಿ ಭವ್ಯ ಭವನದ ಚಿತ್ತಾರ


ಪ್ರಕೃತಿಯ ವಿಸ್ಮಯದ ಆವರಣವ ಸೆರೆಹಿಡದು

ಮೂಡಿಸಿಹ ಅಚ್ಚರಿಯ ಅಚ್ಚುಕಟ್ಟಿನ ಈ ಅಚ್ಚು

ನೋಡಿದೊಡನೆಯೆ ಬೆರಗು! ಮರುಕ್ಷಣವೆ ಅಚ್ಚುಮೆಚ್ಚು! 

ಹೊತ್ತುರಳಿಯೂ ಬಿಡದು, ನೋಡಬೇಕೆನುವ ಹುಚ್ಚು!!


ಎಲ್ಲರೊಳು ಕವಿ ಉದಯ, ಎಲ್ಲರಿಗಿದು ಕವಿಸಮಯ 

ಕಲ್ಪನೆಯ ಕಣ್ತೆರೆಯೆ, ಮುಂದೆ ಆ ದಿವ್ಯಲೋಕ

ಪಾಲ್ಗಡಲ ಮೇಲಿರುವ ಶ್ರೀಹರಿಯ ವೈಕುಂಠ!

ಹಿಮಮಲೆಯ ನಡುವಿರುವ ಗೌರೀಶ ಕೈಲಾಸ!


ಎಲ್ಲೆಡೆಯು ಮಂಜುಮಣಿ,ಅಲ್ಲಲ್ಲಿ ಹಿಮಪಾತ

ತನುಮನವನಾವರಿಸಿ ಧವಳಗಿರಿ, ವಿಮಲಸಿರಿ

ನಿರ್ಮಲತೆ ಮಡುಗಟ್ಟಿ, ತೋರುತ ನಿತ್ಯತೆಯ ಅವತಾರ

ನಿಸ್ಪೃಹತೆ ಮೈಗೂಡಿ, ದಿಕ್ತಟ ಗುಂಜಿಸಿದೆ ಓಂಕಾರ!


ರಚನೆ: "ಸಂತ" (ಸ.ಗು ಸಂತೋಷ್ಟ)

ತಾರೀಖು: ೧೬/೧೧/೨೦೨೪


ಪ್ರೇರಣೆ: ನನ್ನ ಆತ್ಮೀಯ ಗುರು (ಗುರುದತ್) ಅದ್ಭುತವಾಗಿ ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದು, ಹಂಚಿಕೊಂಡ ಛಾಯಾಚಿತ್ರದಲ್ಲಿನ ನಿಸರ್ಗ ಸೌಂದರ್ಯ!ಅ

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...