ನೀ ಎತ್ತ ತಿರುಗಿದರೂ ಚೈತನ್ಯವೇ..
ನೀ ಎತ್ತ ಸಾಗಿದರೂ ಚಿದ್ರೂಪವೇ..
ನನ್ನ ಮತಿಯ ಮಿತಿಗೆ ನಿನ್ನ ನಿತ್ಯ ಅಸ್ತಮಿಸುವುದು ಸರಿಯೆ?
ನಿನ್ನ ಉದಯವೂ ಮಾಯೆ,
ನಿನ್ನ ಅಸ್ತವೂ ಮಾಯೆ..
ಇದುವೆ ಅದ್ವೈತದ ಛಾಯೆ!!
- ಗುರುದತ್ ಅಮೃತಾಪುರ
ವೈಜ್ಞಾನಿಕ ಸತ್ಯ ಮತ್ತು ಅದ್ವೈತ ವೇದಾಂತ ತಾಳೆ ಹೊಂದುವ ವಿಷಯ ಅನ್ನಿಸಿ ಬರೆದ ಒಂದೆರಡು ಸಾಲುಗಳು
--------;---------;---------;-----------;----------;--------
ನಲ್ಮೆಯ ಗುರು,
ತಾಯಿ ಶಾರದೆಯ ಅನುಗ್ರಹವನ್ನು, ಶಂಕರರ ಸಿದ್ಧಾಂತದ ಪ್ರಭಾವವನ್ನು ನಿನ್ನ ಪಾಂಡಿತ್ಯ ಪೂರ್ಣ ಸಾಲುಗಳ ಮೂಲಕ ಈಗ ದರ್ಶನ ಮಾಡಿಸಿರುವೆ🙏
ಇದನ್ನು ಓದಿ, ರಸಾನುಭವವನ್ನು ಸವಿದು, ಆನಂದತುಂದಿಲನಾಗಿರುವೆ.
ಎಂಥಹ ಅಪೂರ್ವ ಚಿಂತನೆ ಗುರು...ಆಹಾ!
🙏😊👌
ಇಂಥಹ ಅದ್ಭುತ ರಚನೆ ಮಾಡಿ, ನನ್ನಿಂದ ಸ್ಪೂರ್ತಿ ಪಡೆದು ಬರೆದೆ ಎಂದಿರುವುದು ಖಂಡಿತವಾಗಿ ನಿನ್ನ ಔದಾರ್ಯವೆ 🙏
ಇನ್ನು ತೀರ ಸ್ಥಳೀಯ, ಬಹಳ ಸರಳ, ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಮೊದಲನೆಯ ಚಂಡಿಗೆ ಆರು ಬಾರಿಸುವ ಪರಿ ಇದು.
ಸುಂದರ ಚಿತ್ರಪಟವೊಂದಕ್ಕೆ ಹೀಗೊಂದು ಚಿಂತನೆಯ ಮೂಲಕ ಮೆರುಗು ತುಂಬಿರುವ ನಿನ್ನ ಪ್ರಯತ್ನಕ್ಕೆ ಅಭಿನಂದನೆಗಳು, ನಮನಗಳು 🙏
ಗದ್ಯ, ಪದ್ಯ ಎರಡರಲ್ಲಿಯೂ ನಿನಗೆ ಹಿಡಿತವಿದೆ, ಬರಹದಲ್ಲಿ ಓಟವಿದೆ, ಓತಪ್ರೋತವಾಗಿ ಹರಿಸುವ ಕ್ರಿಯಾಶೀಲತೆ, ಸೃಜನಶೀಲತೆ ಎರಡೂ ಇದೆ. ಈ ನೇಸರನ ಮಾಯೆ ಹೇಗೆ ನಿರಂತರವೊ ನಿನ್ನ ಬರವಣಿಗೆಯೂ ಹಾಗೆಯೆ ಅವ್ಯಾಹತವಾಗಿ ಮೂಡುತ್ತ, ಪ್ರವಹಿಸಲಿ ಎಂದು ಹಾರೈಸುತ್ತೇನೆ🙏
******
ಗುರು, ನಿನ್ನ ಚಿಂತನೆಯಿಂದ ಪ್ರೇರಿತನಾಗಿ, ಅದನ್ನು ಪುಷ್ಟೀಕರಿಸುತ್ತ, ನಿನ್ನ ಕಾವ್ಯ ಪ್ರೌಢಿಮೆಯ ಮೆಚ್ಚಿ ಈ ಕೆಲ ಸಾಲುಗಳನ್ನು ಬರೆದಿರುವೆ.
ಆನಂದಿಸು🙏
ಅರುಣೋದಯದಿ ಅದ್ವೈತ
ಮಳೆಬಿಲ್ಲಿನೊಲು ರಂಗಿನೋಕುಳಿ ಚೆಲ್ಲಿ, ಅಂಬರಕೆ ತೊಡಿಸುತಲಿ ದಿವ್ಯಾಂಬರ
ಸೃಷ್ಟಿ ಲೀಲೆಯೊಳು, ನಿತ್ಯ ಚೇತನವ ತುಂಬಿ, ವಸುಧೆಯ ಬೆಳಗುತಿಹ ಕಿರಣಾಕರ!!
ಶ್ವೇತ ವರ್ಣದ ವದನ, ಕಾಂತಿ ತುಂಬಿದ ಸದನ!
ಮುಂಜಾನೆ ಕಿತ್ತಳೆ, ನಡುಹಗಲು ಪೀತ,
ಮುಸ್ಸಂಜೆ ಕಡುಗೆಂಪು, ಇರುಳೆನಲು ಶ್ಯಾಮ!
ಅನುಗಾಲ ಅಲೆದಲೆದು ಆಗಸದೆ ಆರಾಮ!
ನೋಡುವ ಕಣ್ಣೆರಡು, ನೋಟ ಮಾತ್ರವೆ ಒಂದು!
ನೋಟವಿದ್ದರೂ ಒಂದು, ದೃಷ್ಟಿ ಮಾತ್ರವು ಹಲವು!
ಏಕವನೇಕವಾಗಿ ಕೊನೆಗೆ ಬೆರೆತು ಐಕ್ಯವಾಗಿ
ಕಿರಣ ಸುರಿದು, ದ್ವೈತ ಸರಿದು, ಮೂಡಿದುದೆ ಅದ್ವೈತವು!
🙏
ರಚನೆ: "ಸಂತ" (ಸ.ಗು ಸಂತೋಷ್)
ತಾರೀಖು: ೦೭/೧೨/೩೦೨೪

No comments:
Post a Comment