Tuesday, June 26, 2018

ಕವಿತೆ: ಈ ಬಂಧನ

                 ಈ ಬಂಧನ

ಬೆನ್ನ ಮೇಲೆ ಕೂಸು ಮರಿ, ಮೊಗದ ತುಂಬ ಮಂದಹಾಸ
ಇನಿತು ಇಲ್ಲ ಕೋಪ ತಾಪ ಮಂಗಮಾಯ ಅಟ್ಟಹಾಸ
ಏನು ಹೇಳು ಕಾರಣ, ಈ ಅಪರೂಪದ ತಾರಣ
ಉಣಿಸಬಹುದೆ ನಿತ್ಯ ನೀನು ಮನಸಿಗಿಂತ ಹೂರಣ

ಗೊಣಗೊಣಗುತ ಜರಿದು ತನ್ನೆ ಶರಣಾಗದೆ ಮ್ಲಾನಕೆ
ಹಾಡಿ ಕುಣಿದು ಮನದ ಹಕ್ಕಿ ಸುಖದಿ ತೇಲಿ ಮೇಲಕೆ
ಯಾವ ಮೂರ್ತಿ ಚೇತನ, ಅದಾವ ಸೃಷ್ಟಿ ಪ್ರೇರಣ!
ಕಾಣಬಹುದೆ ನಿನ್ನ ನೀನು ನೋಡಿಸಂತದರ್ಪಣ!!

ಅವರಿವರನು ಜಪಿಸಿ ಶಪಿಸಿ ಮೊರೆ ಹೋಗದೆ ಮುನಿಸಿಗೆ
ಕಲೆತು ಬೆರೆತು ಜಗವ ಅರಿತು ಮನ ಮಲ್ಲಿಗೆ ವಿಕಸನ
ಹೇಗೆ ಇಂತ ಹೊಸತನ, ‘ಸುಶಾಂತಮನದ ಸಿರಿತನ
ಆಗಬಹುದೆ ಹೀಗೆ ಸಾಗಿ, ಬಾಳು ನವ ನವೀನ ನಂದನ!

ಗಣಕಯಂತ್ರ ಹಣದ ಮಂತ್ರ, ಧೂರ್ತ ಭೂತ ಕೈವಶ!
ಎಲ್ಲ ಕಳಚಿ ಹೊಸಬೆಳಕು, ಮನದಂಗಳ ಸುಪ್ರಕಾಶ!
ಹೃದಯಂಗಮ ಸ್ಪಂದನ! ಈ ಪ್ರೀತಿ ಸ್ನೇಹ ಚಂದನ!
ಘಮಿಸಿ ರಮಿಸಿ ನಲಿಸುತಿರಲಿ, ನಮ್ಮ ಹೀಗೆ ಈ ಬಂಧನ!
                     ರಚನೆ – “ಸಂತ” (ಸಂತೋಷ ಸ.ಗು)
                     ತಾರೀಖು೨೧/೦೯/೧೭

Saturday, June 23, 2018

ಕವಿತೆ: ಮೈತ್ರಿ ಮಲ್ಲಿಗೆ

            ಮೈತ್ರಿ ಮಲ್ಲಿಗೆ

ಬಾಲ್ಯ ದಾಟಿ, ಹರಯ ಮೀಟಿ, ನಿನ್ನ ಮದುವೆಯ ಶುಭದಿನ
ನಿನ್ನ, ನನ್ನ ಮೊದಲ ಭೇಟಿ, ನೆನಪದೆಂದಿಗೂ ಅನುಪಮ

ಮೊದಲ ಮಿಲನದೆ ಎಂಥ ಪ್ರೀತಿ, ಒಡನೆ ಸಲಿಗೆ ಗೆಳತಿ ರೀತಿ
ಭಾವ ಉಕ್ಕಿತು, ಮಾತು ಚಿಮ್ಮಿತು, ಹೃದಯ ಹಾಡುತ ಶೃತಿಯು ಸೇರಿತು
ನೋಡನೋಡುತೆ, ಚಣಗಳುರುಳುತೆ, ’ಭಾವಗೆಳತಿ’ಯ ಸೃಷ್ಟಿ ತೋರಿತು

ಮುಗಿದು ಮದುವೆ, ಒಡನೆ ಸರಿಯೆ, ಏನೊ ಮಾಯೆ ಎಂಥ ಸೆಳೆತ!
’ಎಲ್ಲೆ’ ಇದ್ದರೂ  ಮಾತು ಇಣುಕಿತು, ಬಾಲ್ಯ ಕುಣಿಯಿತು, ಹರಯ ಜಿಗಿಯಿತು
ಸಮಯ ಜಾರುತ, ಬೆಸುಗೆ ಬಿಗಿಯಿತು, ಸ್ನೇಹ ಕಡಲಲಿ ಪಯಣ ಸಾಗಿತು

ಕಡಲಿನಾಚೆಗೆ ರಮ್ಯ ನೋಟ, ಹಚ್ಚ ಹಸುರಿನ ದಿವ್ಯ ತೋಟ!
ಜಾಜಿ, ಸಂಪಿಗೆ, ಮಲ್ಲೆ, ಸ್ಫಟಿಕ, ವಿಮಲ, ಕೋಮಲ, ಮನಸು ನಿರ್ಮಲ
ಕಂಪು ಹಬ್ಬುತ, ತಂಪು ಅಪ್ಪುತ, "ಮೈತ್ರಿ ಮಲ್ಲಿಗೆ" ಅರಳಿ ನಲಿಯಿತು!

ಋತುಗಳುರುಳುತ ಎನಿತೊ ಕವಲು, ಸಮೆದ ಮಡಿಲು, ನಮೆದ ಒಡಲು
ಕವಿದ ಮೋಡವನೆಲ್ಲ ಚದುರಿಸಿ, ಮಿಲನ ಮಧುಮಳೆ ಜಗವ ತೋಯಿಸೆ,
ಚೈತ್ರ ಮೂಡಿದೆ, ಧಾತ್ರಿ ನೆಚ್ಚಿದೆ, ನವ್ಯ ನಂದನ ಸಗ್ಗ ಸೃಜಿಸಿದೆ!


ಸ್ಫೂರ್ತಿ - ನನ್ನ ಅರ್ಧಾಂಗಿ ಶೃತಿ ಹಾಗು ನನ್ನ ಆಪ್ತಮಿತ್ರನ ಅರ್ಧಾಂಗಿ, ನನ್ನ ಸೋದರಿ ಶ್ರೀವಿದ್ಯಳ ಸ್ನೇಹ ಬೆಸುಗೆಯ ಸುತ್ತಲೂ ಈ ಕವಿತೆಯನ್ನು ಹೆಣೆದಿರುವೆ. ಅವರ ಮೊದಲ ಭೇಟಿ, ತದನಂತರದ ಸುಂದರ ಚಣಗಳು, ಬೇರೆ ಊರು,ದೇಶಗಳಲ್ಲಿ ವಾಸವಿದ್ದರೂ ಮನಸುಗಳು ಹತ್ತಿರವಾದ ಬಗೆ, ಬಾಳಿನ ಮುಗಿಯದ ಎಡರು ತೊಡರುಗಳು, ಈಗ ನನ್ನ ಆಪ್ತ ಮಿತ್ರನ ಮಾಂತೇಶನ ಮದುವೆಯಲ್ಲಿ ಸಿಗಲಿರುವ ಮರು ಮಿಲನದ ಸಂತಸ... ಇವೆ ಈ ಕವಿತೆಯ ಜೀವಾಳ


ರಚನೆ - "ಸಂತ" (ಸ.ಗು.ಸಂತೋಷ್)
ತಾರೀಖು - ೧೧/೦೧/೧೨

ಕವಿತೆ: ವಿಯೆನ್ನದ ಬೆಳಗು!

            ವಿಯೆನ್ನದ ಬೆಳಗು!


ಬೆಳಗಿನ ಹೊತ್ತು,
ಸಪ್ತ ಸಾಗರದಾಚೆಯೆಲ್ಲೊ, ಸ್ನಿಗ್ದ ನಗರದ ನಡುವೆಯೆಲ್ಲೊ!
ವಿಹರಿಸಲು, ವಿರಮಿಸಲು, ಸಂಗಾತಿಗೆನೆ ಕಾಯುತ್ತ
ಉದ್ದಗಲ ರಸ್ತೆಯಲಿ, ನೋಟ ಅತ್ತಿತ್ತ ಹರಿಸುತ್ತ
ಬಸ್ ತಂಗುದಾಣದಲಿ ಒಬ್ಬನೆ ಕುಳಿತಿದ್ದೆ

ಹೊತ್ತೇರೆ,
ತಿಳಿ ನೀಲಿ ಆಕಾಶ, ರವಿ ತೇಜ ಸುಪ್ರಕಾಶ
ಇಂತಿದ್ದು, ಕೊರೆವ ಚಳಿ, ಗಾಳಿ
ಏಕಾಂತದಿ ಮನಸೆಲ್ಲೊ ತೇಲಿ
ಮೆಲ್ಲನೆ ಬಿಗಿಯಿತು, ಮನದ ಸುತ್ತಲೂ ಮುಳ್ಳಿನ ಬೇಲಿ
ಹೊರಳಿತು, ಉರುಳಿತು, ’ಬದುಕು ಜಟಕಾ ಬಂಡಿ’ಯ ಗಾಲಿ!

ಸ್ತಬ್ದ ವಾತಾವರಣ!

ಉದುರುವ ತರಗಲೆಯೊ, ಪೋಕರಿಗಳ ತರಲೆಯೊ
ಅತ್ತಿತ್ತ ಹರಿದಾಡೊ ಗಾಡಿಗಳ ಮೊರೆತವೊ!... ಹೀಗೆ ನಡುನಡುವೆ ಹಗರಣ!

ಸುಮ್ಮನೆ ಕುಳಿತ ಮನ, ಬೆಚ್ಚುತ ಒಮ್ಮೊಮ್ಮೆ, ಬೆದರುತ ಹೀಗೊಮ್ಮೆ, ಬೆರಗುತ ಹಾಗೊಮ್ಮೆ,
ಬಾಳ ಹಾದಿಯ ’ಅನಾವರಣ’!

ಬಾಲ್ಯ ತಾರಣ, ಸ್ನೇಹ ಚಾರಣ,
ಪ್ರಣಯ ಹೂರಣ, ಹಸಿರು ತೋರಣ,
ಜೀವ ಅನುಪಮ, ಭಾವ ಪೂರ್ಣಿಮ...ಹೀಗೆ ಸಾಗುತ್ತ.ಅ.ಅ.ಅ...

ಮೂಡಿತು ತಿರುವು, ದೂರ ದೂರಕ್ಕೂ ಮುಗಿಯದ ಹರವು!
ಬೇಡದ ನೆನಪುಗಳು, ಚೂರಾದ ಕನಸುಗಳು
ಒಸಗೆಯ ನೆಪದಲ್ಲಿ ಕಿತ್ತೊಗೆದ ಬೆಸುಗೆಗಳು
ಸಂಕೀರ್ಣ ಸುಳಿಯಲ್ಲಿ ನಲುಗಿದ ಬಯಕೆಗಳು
ಪುಂಖಾನುಪುಂಖದೊಲು ಮುಗಿಯದ ಬವಣೆಗಳು!

ಎನಿಸಿತು,
ಹೇಗಿದ್ದರೆ ಏನ್, ಏನಿದ್ದರೆ ಏನ್, ಎಲ್ಲಿದರೆ ಏನ್
ಇದು ಸಂಸರಣ! ಎಲ್ಲ ಸಂವರಣ! ಇಲ್ಲ ಸಂಸ್ಕರಣ!
ಬಿಡದು ’ಅರ್ಧ ಸತ್ಯ’ದ ಗ್ರಹಣ!
ಹೀಗೇನೆ, ಇಷ್ಟೇನೆ, ಈ ಬಾಳಿನ ’ಆವರಣ’
********************
ಘಳಿಗೆಗಳು ಹೊರಳುತ್ತ, ಭಾವದಲೆ ಮಿತಿಮೀರಿ
ಕುಸಿದು ನಿಂತಿತು ಗಾಲಿ, ಕೊಚ್ಚಿ ಹೋಯಿತು ಬೇಲಿ
ಮೆಲ್ಲ ಮೆಲ್ಲನೆ ಭ್ರಾಂತ ಮನ ಆಯಿತು ಶಾಂತ
ನೋಡ ನೋಡುತ್ತ ಮರಳಿದನು ’ಸಂತ’ ನಿಶ್ಚಿಂತ!


ರಚನೆ - ಸಂತ (ಸ.ಗು.ಸಂತೋಷ್)
ತಾರೀಖು - ೧೫/೧೦/೧೧

ಕವಿತೆ: ಬೇಸರಿನ ಸಂಜೆ

        ಬೇಸರಿನ ಸಂಜೆ

ಬೇಸರಿನ ಸಂಜೆಯದು ವಿರಹದೆದೆ ತಾಪವದು ಇನ್ನಿಲ್ಲ ಓ ನಲ್ಲೆ ನಾ ಬಂದಿಹೆ
ಮುಸ್ಸಂಜೆ ಸೆರಗಿನಲಿ ಪ್ರಿಯತಮನ ಸನಿಹದಲಿ ಇನ್ನಿಲ್ಲ ಏಕಾಂತ ನಾ ಕೂಡಿಹೆ

ಬನದ ಮೆದುಹಾಸಿನಲಿ ಮರದ ತಣ್ಣೆಳಲಿನಲಿ
ಒಲವ ಕಚಗುಳಿ ಸುಳಿಸಿ ಮುದಗೊಳಿಸುವೆ
ಬಾನ ವಿಸ್ತಾರದಲಿ ಭಾವ ಚಿತ್ತಾರದಲಿ
ಸರಸದೋಕುಳಿ ಎರಚಿ ಎದೆ ನೆನೆಸುವೆ
ವಿರಹದಮೆಯನು ಕಳೆದು ಸನಿಹದುದಯವ ಕಾಣೊ ಸುಮುಹೂರ್ತ ಒದಗಿಹುದು ಓ ಪ್ರಿಯತಮೆ

ಬನದ ಹೂಹಾಸಿನಲಿ ಸೊಗದ ಕಂಪೆಲರಿನಲಿ
ಒಲವ ಮದಿರೆಯ ಕುಡಿಸಿ ನಿನ ತಣಿಸುವೆ
ಬಾನ ತಂಬೆಳಕಲ್ಲಿ ಭಾವ ಹೊಂಬೆಳಕಲ್ಲಿ
ಪ್ರೇಮ ಮೆರುಗನು ತೋರಿ ಮನ ಬೆಳಗುವೆ
ವಿರಹ ಮೋನವ ಕಳೆದು ಸರಸ ನುಡಿಮಳೆಗರೆಯೆ ಸುಮುಹೂರ್ತ ಒದಗಿಹುದು ಓ ಪ್ರಿಯತಮೆ

ರಚನೆ: ಸಂತ (ಸ.ಗು.ಸಂತೋಷ್)
ತಾರೀಖು: ೨೦೧೦

ಕವಿತೆ: ’ಖರ’ಪುಟ

           ’ಖರ’ಪುಟ

’ಖರ’ಪುಟದ ಸಡಗರದಿ, ಪ್ರಕೃತಿಯ ಸಂಭ್ರಮದಿ
ಮಿತ್ರ, ಮೌನ ಇಣುಕಿಸಿ ನೀ ಏಕೆ ಕುಳಿತೆ?

ಎಲ್ಲೆಲ್ಲೂ ಹೊಸ ಹೊಳಪು, ಜೀವನದಿ ನವ ಹುರುಪು
ಹೊಸ ಆಸೆ, ಹೊಸ ಚಿಗುರು, ಹೊಸ ಕನಸು, ಹೊಸ ಉಡುಪು
ಹಳೆ ನೆನಪು ಬಾರದೆ ಮರೆಯಾಯಿತಿದಕೆ?
ಎಲ್ಲೆಲ್ಲೂ ರತ ಗಾನ, ಬುವಿಯೆ ಸ್ವರ್ಗದ ತಾಣ

ಋತ ಗಾನ, ಪಿಕ ಗಾನ, ಹಬ್ಬ ಹರಿದಿನ ಧ್ಯಾನ
ಸಖಗೀತ ಕೇಳಿಸದೆ ಮರೆಮಾಚಿತಿದಕೆ?
ಎಲ್ಲೆಲ್ಲೂ ಪಚ್ಚೆ ಪೈರು, ನಿತ್ಯ ಉತ್ಸವದ ತೇರು
ಬಣ್ಣ ಬಣ್ಣದ ಹೂವು, ಕಂಪೆಲರು, ಮೈ ಮರೆವು!

ನಮ್ಮೈ ಮೈತ್ರಿ ಮಲ್ಲಿಗೆ ಮಸುಕಾದುದಿದಕೆ?
ಎಲ್ಲೆಲ್ಲೂ ಸಿರಿ ಸುಗ್ಗಿ, ಇಂದ್ರಿಯಗಳು ಹಿಗ್ಗಿ,
ನಲವು ಗೆಲವು ಸಾಗಿ, ಎಲ್ಲ ಹೋಳಿಗೆಯಾಗಿ
ನಮ್ಮ ಮಧು ಮೈತ್ರಿ ಹೂರಣವಾದುದಿದಕೆ?


                               ರಚನೆ - ’ಸಂತ’ (ಸ.ಗು ಸಂತೋಷ್)
                                        ತಾರೀಖು - ೨೭/೦೬/೧೧

ಕವಿತೆ: ಶಾರದೆ



ಅಮ್ಮ, ಶಾರದೆ ಶೃಂಗಗಿರಿ ನಿವಾಸಿನಿ
ಬಂದೆನ್ನ ಕನಸಿನಂಗಳವ ಬೆಳಗಿ, ಹರಸಿ
ದಾರಿ ದೀವಿಗೆಯಾಗಿ, ಭಕ್ತಿ ಕೋವಿದೆಯಾಗಿ
ಕರವಿಡಿದು ನಡೆಸುತ್ತ, ಹರಸುತ್ತ, ಕರುಣಿಸುತ
ಎನ್ನೆಲ್ಲ ಮರೆವನ್ನು, ಜಡವನ್ನು ಮನ್ನಿಸುತ
ದಿವ್ಯ ಸನ್ನಿಧಿಗೆ, ನಿನ್ನ ಮಂಗಳದಂಗಳಕೆ
ಇನಿತು ಸುಗಮದಿ, ಮಮತೆಯೊಲು ಕರೆಸಿಕೊಂಡೆಯ!


ಓ ತಾಯೆ, ಶಾರದೆಯೆ, ವಾಗ್ದೇವಿ, ಸರಸತಿಯೆ
ಅರಿಶಿನ ಕುಂಕುಮದ ವರ್ಣ ಪೂರಿತ ಸಾಲೆ
ಅರ್ಪಿಸಿರೆ ನಿನ್ನಡಿಗೆ ಸುಮುಹೂರ್ತದ ವೇಳೆ
ಸುಮ ಮಂಗಳ ದ್ರವ್ಯದಿಂದಲಿ, ಸಿಂಗರಿಸಿ
ಸೇವೆಯುಡುಗೆಯಿಂ ಅಂದದೊಲು ಕಂಗೊಳಿಸಿ
ಮಂದಹಾಸವ ಬೀರಿ, ಸುಪ್ರಸನ್ನತೆ ತೋರಿ
ಮನದೆ ಧನ್ಯತೆ ನೀಡಿ, ಜೀವ ಪಾವನಗೈದೆಯ!


          ರಚನೆ - "ಸಂತ" (ಸ.ಗು. ಸಂತೋಷ್)
         ತಾರೀಖು - ೧೦/೦೪/೧೦

ಕವಿತೆ: "ಮುರಿದ ಮಾತು"

                "ಮುರಿದ ಮಾತು"


ನಿನ್ನ ಮನಸಿನ ಭಾವ, ನಮ್ಮ ಸ್ನೇಹದ ಜೀವ
ಚಿವುಟಿ, ನೋಯಿಸಿ ಬಿಟ್ಟೆ! ಮನ್ನಿಸೆನ್ನನು

ಸಂಬಂಧಗಳ ನವಿರು ಬೆಸುಗೆಯೆ ಇಂದು
ಬಂಧನದ ಗರಳ ರೂಪ ತಾಳುತ ಬಂದು
ಮನವ ಜರ್ಝರಿಸಿ ಭಾವ ಚಿತ್ತಾರವ ಕೆಡಿಸಿ
ಹೃದಯ ಶೂನ್ಯತೆ ಇತ್ತು, ದುಮ್ಮಾನ ಕಾಡಿದೆ!

ಅಚ್ಚಳಿಯದ ಚೆಲುವ ನೆನಪುಗಳ ಸಿಂಧು
ಪ್ರವಹಿಸುತಲಿಂದು, ರುದ್ರ ನರ್ತನ ತಂದು
ನೇಹದುಸಿರನೆ ಸವೆಸಿ, ಮನದಿ ಕಂಪನ ಹರಿಸಿ
ಬಾಳ ನೌಕೆಗೆ ಬಿರುಕು?! ಮುಳುಗೆಂತೊ? ಕಾಡಿದೆ!

ನೆನಪಿನಾಗಸ ತುಂಬ ಮೈತ್ರಿ ಮಲ್ಲಿಗೆ ಬಿಂಬ
ಆವರಿಸಿ ನಡುಗುತಿದೆ ಒಳನಾಡಿಯ ತುಂಬ
ವಿರಹ ಬೇನೆಯನುಣಿಸಿ, ಮುರಿದ ಮಾತನು ನೆನೆಸಿ!
ಗೆಳೆಯನಿಲ್ಲದ ಬದುಕು! ಏನೇನು ಬೇಡಿದೆ!


              ರಚನೆ - ’ಸಂತ’(ಸ.ಗು.ಸಂತೋಷ್)
          ತಾರೀಖು - ೩೦/೦೫/೧೦

ಕವಿತೆ: ಮನದ ಮಿಡಿತ

   ಮನದ ಮಿಡಿತ
        ~~~~~~~~~
ಉಮ್ಮಳದ ಬಿಸಿ ಬೇಗೆ ಉತ್ತುಂಗಕೇರಿಹುದು
ಕಂಬನಿಯ ದಳ್ಳುರಿಯು ಅಂಗಾಂಗ ಸುಡುತಿಹುದು
ಗರಳ ನೀರವ ಮೌನ ಮೃತ್ಯುಕೂಪಕೊಯ್ದಿಹುದು
ಜೀವದಮೃತವ ಉಣಿಸಿ ಕೈಹಿಡಿದು ನೀ ನಡೆಸು!

ಬಾಡಿ ಬಿಸುಟಿದ ಬನಕೆ ಹಸಿರಿನುಸಿರನು ತಂದು
ವರ್ಣ ವಂಚಿತ ಕನಕೆ ಎನಿತೊ ಬಣ್ಣವ ಸುರಿದು
ಕಾರ್ಮುಗಿಲ ಬಾಳಿನಲಿ ಬೆಳಕಿನಂಗಳ ತೆರೆದು!
ಒಲವ ಸುಧೆಯನು ಹನಿಸಿ ಮನಸನು ನೀ ತಣಿಸು!

’ಚೈತ್ರ ಚೆಲುವಿನ ಬದುಕು, ನಿತ್ಯ ಇಲ್ಲದೆ ತೊಡಕು!
ನಲವು ಒಲವಿನ ಸೊಗಸು, ಎಂದು ಬಾರದೆ ಬಿರುಸು!
ಭಕುತಿ ಯುಕುತಿಯ ಬೆಳಕು, ಇರದೆ ಯಾವುದೆ ಮುಸುಕು!’
ಇಂದಿಗೆಲ್ಲವಿದು ಕನಸು, ಸೇರೆನ್ನ ಮಾಡಿದ.. ನೀ ನನಸು!

ಮೌನ ಸಂಕಲೆ ಕಳಚಿ, ಮನದ ಮಿಡಿತವ ನುಡಿದೆ,
ವಿರಹ ಭಾರವ ದೂಡಿ, ಪ್ರಣಯ ಪರ್ವವ ಬರೆದೆ,
ಹೊಸತು ರಾಗದಿ ಹಾಡಿ, ನವ್ಯ ಲೋಕವ ಕರೆದೆ
ಬಲ್ಲವ ನೀ ತಿಳಿಸು, ಎನ್ನ ಜೀವದ ಓ ಅರಸು!



       ರಚನೆ - ’ಸಂತ’ (ಸ.ಗು.ಸಂತೋಷ್)
       ತಾರೀಖು - ೧೩/೧೨/೦೯



ಪ್ರೇರಣೆ:




THE TEARS JUST ROLL DOWN ….





The tears just roll down…

The tears just roll down my cheeks…





The tears just roll down…

As I write these words with a mind sadness drown…

Between forced to smile and feel like a clown

Whom to blame for this breakdown





I hear the killing silence speak

When around me I sneak

From my desk with hands on my cheek

For in ma life time, this has been not so good a week.



Unpleasants to endure, for no wrongs of ours

Beneath their flawless delusion lies the scary scar

Unknowingly caught amidst the mind reckoning smoke of vicious cigars

Altogether I started seeing  a bundle of flying stars





The true innocence of mind - disciplined and cultured

Caught in this fiery wind of blunder

It’s the beautiful colors of the flowers they do hinder

As in the garden they walk, the couple’s eye they blinder



The smell of poisonous ivy in my breath,

Inhaled and I hear that I am breathing death,

I sense the body, mind and soul go numb

For the world festivity my life to remain dumb!!!





For generation to arrive, we need to do good,

However all under protective hood,

Coz the wind of blunder would

Stealthily intervene in ones system to spoil ones quality of childhood





The tears just roll down…

The tears just roll down my cheeks…







Oh! GOOD ONE in you I believe for good to win over evils

Let you turn into angels the once who were dancing devils

Let peace and calmness survive in ones life and be chill

Let us all go up in life as we move with experiences uphill





Is this your way to teach us our lessons,

In life, by offering mixed feelings in small sessions

Seeding one potion of vial in our hearts and opposite ones in them

Just to turn each to us to unique sparkling crystal gem?





You are pretty pranky

First I see it no tricky

Is it for our inner potential to harness

That you laugh at our helplessness?





At times its nothing much I can help myself with

It’s our togetherness alone which can form the pith

Calm magical talks wound by wordsmith,

To instill and spread words of love and happiness deep herewith





Let the tears of sadness bloom as tear of joy my dear

Do not worry for I AM always here,

With you at times of high and low.

Come on!  now let me see a peaceful smile on that face to glow





Now!

The tears just roll down…

The tears just roll down my cheeks.



                                                                                                Poornima S Jain

                                                                                                (8th Dec 2009 +/- 8ev)

ಕವಿತೆ: ’ದಿವ್ಯಾನುಭೂತಿ!’


   ’ದಿವ್ಯಾನುಭೂತಿ!’


||ಸ್ವಗತ||
  ಬುವಿಯಂಗಳದಿ ಎನಿತೊ ವಸಂತಗಳ ಸವಿದ ಅಕ್ಷಿಯೆ
  ಆವ ನೋಟಕೆ, ಆವ ಮಾಟಕೆ, ಈ ಪರಿ ಅಚ್ಚರಿಯೆ!
  ಬೆಟ್ಟ ಗುಡ್ಡಗಳೊ, ದಟ್ಟ ಕಣಿವೆಗಳೊ, ಕಾನನದ ಸೊಬಗೊ!
  ಉಲಿವ ಹಕ್ಕಿಗಳ, ನಲಿವ ಕುಸುಮಗಳ ಸಂಭ್ರಮದ ಮೆರುಗೊ!
  ಇಳಿವ ಝರಿ ಭರವೊ, ಮೊರೆವ ಅಲೆರವವೊ, ಆಕರ್ಷದಬ್ಧಿಯೊ!
  ತಳಿರೆಲರೊ, ಮಲರೊ! ಶಶಿ-ರವಿಯೊ ಘನವೊ! ಪ್ರಕೃತಿಯ ತನುವೊ! ||ಸ್ವಗತ||
||೧||
  ಪ್ರಕೃತಿಯ ಮಡಿಲಿನಲಿ ಉಂಟುಂಟು ಅಚ್ಚರಿ ನಿತ್ಯ ನಿಮಿಷ
  ಆದರೂ ಈ ಪರಿಯದಿನ್ನಿಲ್ಲ, ಇದಕೆ ಸರಿಸಾಟಿ ಇದುವೆ!!
  ಒಲವೊಳೊಲವ ಮಧು ಸಿಂಚನ, ಒಡಲೊಳೊಡಲ ಸುಮ ಕಂಪನ
  ಮೀಟಿ ಎದೆ ಶ್ರುತಿ ರಿಂಗಣ! ಹಿಗ್ಗಿ ನೆನೆ ಮನ ಕಂಕನ!
  ಆರ್ದ್ರ ಭಾವಾಲಿಂಗನ! ಸುಖವಗಮ್ಯ ರೋಮಾಂಚನ!
  ಜತ್ತೊಲವ ಅಭ್ಯಂಜನ! ಅನುಚಣವು ಸುಗ್ಗಿ, ರಂಜನ!
||೧||
||೨||
  ಕವಿಯ ಕಲ್ಪಕೆ ಸಿಗದ! ನುಡಿಯ ಎಲ್ಲೆಗೆ ಸಿಗದ!
  ಕನದ ಮೇರೆಯ ಜಿಗಿದ! ಮನುಜ ಮಿತಿಗಳ ತೆರೆದ!
  ಒಡಲಿನಂಗಳ ಗುಡಿಯ! ಬೆಳಗೊ ಜೀವ ಜ್ಯೋತಿ!
  ನವ್ಯಾನುಭೂತಿ! ಸೃಷ್ಟಿ ಸೃಜನದ ’ದಿವ್ಯಾನುಭೂತಿ’!!
  ಸುಕೃತದ ಬದುಕೆಂಬೆ, ಸಾರ್ಥಕದ ಸೊಗಸೆಂಬೆ
  ನೀಡಿರಲು, ತೋರಿರಲು, ಸೃಷ್ಟಿ ಈ ರಸ ನಿಮಿಷ!
||೨||
       ರಚನೆ - ’ಸಂತ’(ಸ.ಗು.ಸಂತೋಷ್)
       ತಾರೀಖು - ೧೪/೦೩/೦೯

"ಕವಿತೆ: ಚೈತ್ರ ಪರ್ವ"

               "ಚೈತ್ರ ಪರ್ವ"


ಓ ಅಂಗನೆ, ಮನದನ್ನೆಯೆ ತೆರೆಯಿನ್ನು ಬೇಕೇನು ನಿನಗೆ!
ನಿನ ನಲ್ಲನ, ಅನಂಗನ ಸೇರಿನ್ನು ತೆರೆ ಸರಿಸಿ ಮರೆಗೆ!

ಮಲೆನಾಡಿನ ಗಿರಿಕಾನನ, ರಮಣೀಯ ಸೌಂದರ್ಯ ನಮಗೆ!
ಸಹ್ಯಾದ್ರಿಯ ಸಲೆಮಾರುತ, ಅನವರತ ತಣ್ಣೆಲರೆ ನಮಗೆ!
ನದಿಯೋಟದ ಅಲೆಯಾಟದೆ ಸಂಗೀತ ಸುವ್ವಾಲೆ ನಮಗೆ!
ತಿಳಿಯಂಬರ, ಹೊಳೆವಂಗಣ ದಿನರಾತ್ರಿ ಹುಣ್ಣಿಮೆಯೆ ನಮಗೆ!

ಹೂ ಕಂಪಿನ, ನೆಲೆತಂಪಿನ, ಅನುಕಲ್ಪ ಹೂದೋಟ ನಮಗೆ!
ಸಿರಿದೋಟದ, ಬುವಿಮಾಟದ ಅಪರೂಪ ಮಧುಮಂಚ  ನಮಗೆ!
ಶುಕ ಕೂಜನ, ಪಿಕ ಗಾಯನ, ಅನುಭಾವ ಸುಖಭೋಗ ನಮಗೆ!
ಋತು ಚೈತ್ರದ, ವನ ಪರ್ವದ, ನವಕಾವ್ಯ ಪ್ರಕೃತಿಯೆ ನಮಗೆ!

ನವಜೀವನ, ನವಯೋಜನ, ಅನುಚಣವು ನವರಸವೆ ನಮಗೆ!
ಹೊಸ ಮೋಪಿನ, ಹೊಸ ಕಾಪಿನ ಅನುಕೂಲ ಸಮರಸವೆ ನಮಗೆ!
ಕವಿ ಚೇತನ, ಸವಿಗಾಯನ, ಶ್ರುತಿಗೀತ ಸಂತೋಷ ನಮಗೆ!
ಯುವ ಪ್ರಾಯದ, ಬಿಸಿ ಕಾಯದ ಆಲಿಂಗದತಿರಸವೆ ನಮಗೆ!



                             ರಚನೆ - "ಸಂತ" (ಸ.ಗು.ಸಂತೋಷ್)
                                           ತಾರೀಖು - ೨೧/೦೨/೦೯

ಕವಿತೆ: ಬೆಸುಗೆಯ ಒಸಗೆ

           "ಬೆಸುಗೆಯ ಒಸಗೆ" 
           ************
 ನಿಮ್ಮ ಪತ್ರವ, ಅಲ್ಲಿ ಭಾವ ಚಿತ್ರವ ; ಕಂಡು ಹಿಗ್ಗಿದೆ ಜೀವ, ಚೈತ್ರ ಸಂಭ್ರಮ
 ಪ್ರೀತಿ ಸೋದರಿ ಎನ್ನ ಪ್ರಾಣ ಸ್ನೇಹಿತ ; ಕಾಣೆ ಇಂಥಹ ಬೆಸುಗೆ, ದಿವ್ಯ ಅನುಪಮ

\೧\
ಮನದಾಳ ನೋವುಗಳನ್ನ, ತಿಳಿಸದೆಯು ತಿಳಿಯುತ ಹೇಗೊ,
   ತಂಪಾದ ಮಾತಿನಲ್ಲಿ ನೀ ತಣಿಸುವ ರೀತಿ
 ಸಿಹಿಯಾದ ಮಾತುಗಳಲ್ಲಿ, ಒಂದೊಂದೆ ನೆನಪನು ಚೆಲ್ಲಿ,
   ಮೊಗದಲ್ಲಿ ನಗೆಯ ತಂದು ನೀ ನಲಿಸುವ ರೀತಿ
 ಸಿರಿ ತೋರಲು, ಸುಖ ನೀಡಲು, ಮನ ಸೋತಿದೆ
 ನಿಜ ನಿಜ ನಿಜ ಗೆಳೆಯ
\೧\

\೨\
 ಕೆಲವೇನೆ ತಿಂಗಳ ಹಿಂದೆ, ಕೈಹಿಡಿದು ಗೆಳೆಯನ ಬಂದು,
   ನಗೆನುಡಿಯ ಹನಿಸಿ ನಿತ್ಯ ನೀ ಬೆರೆತಿಹ ರೀತಿ
 ಹೊಸತಾಗಿ ನಂಟನು ಬೆಸೆದು, ಸೋದರಿ ಪ್ರೀತಿಯ ಎರೆದು,
   ಉಲ್ಲಾಸ ಹೊಸತನು ತಂದು ನೀ ನಲಿಯುವ ರೀತಿ
 ಈ ಜೀವಕೆ, ನವ ಭಾವಕೆ, ಬೆಳಕಾಗಿದೆ
 ನಿಜ ನಿಜ ನಿಜ ತಂಗಿ
\೨\
*******************************************************************************
ಪೇರಣೆ: ಆತ್ಮೀಯ ಗೆಳೆಯ ಕೆ.ರಾಘವೇಂದ್ರ ಹಾಗು ನಲ್ಮೆಯ ಸೋದರಿ ಶ್ರೀವಿದ್ಯಳ ನಿರ್ಮಲ, ಉತ್ಕಟ ಅಕ್ಕರೆ, ಸ್ನೇಹ, ಒಲವಿಗೆ, ನಾನು ಶೃತಿ ಇಬ್ಬರೂ ನಿಬ್ಬೆರಗಾಗಿ ಆಹ್ಲಾದದಿಂದ ಮನ ಸೋತಿದ್ದೇವೆ...ಮನಸ್ಸಿನ ಭಾವಕ್ಕೆ ಹೊಸತನ ದೊರೆತಿದೆ...

       ರಚನೆ - ’ಸಂತ’ (ಸ.ಗು.ಸಂತೋಷ್)
       ತಾರೀಖು - ೧೯/೦೩/೨೦೦೯

ಕವಿತೆ: "ಅನಂತ ಲೀಲೆ"


              "ಅನಂತ ಲೀಲೆ" 
                 ******
ಯಾರು ತಾನೆ ಅರಿಯ ಬಲ್ಲ ನಿನ್ನ ಮಾಯೆ ಓ ಅನಂತ
ಎಲ್ಲೋ ಸುಳಿಯು, ಎಲ್ಲೋ ತಿಳಿಯು, ಎಲ್ಲ ಸೂತ್ರ ನಿನ್ನ ಬಳಿಯು!

ಪ್ರೀತಿ ಎರೆವ ಮನಗಳಲ್ಲಿ ಕನಲು, ಭೀತಿ ಭಾವ ತಂದೆ!
ಶಾಂತಿ ಬಯಸೊ ಎದೆಗಳಲ್ಲಿ ನೋವ ಪೂರ ಹರಿಸಿ ನಿಂದೆ!
ಯಾವ ಜೀವ ಹರುಷಕೆಂದು ನಿನ್ನ ಲೀಲೆ ಹೀಗೆ ಕಾಣೆ
ಒಲುಮೆ ನಾದದೆದೆಯ ಒಳಗೆ ಕರುಳ ಕದಡೊ ರುದ್ರ ವೀಣೆ!

ದೈವ ನೆನೆದು ನಡೆಯುವಲ್ಲಿ, ಶಂಕೆ-ಶೂಲ ತೂರಿ ಇರಿದೆ!
ಹೇಗೊ ಸೊಗಸು ಚಿಗುರಿದಲ್ಲಿ, ಜೀವ ಚಿವುಟಿ ಇರುಳ ಸುರಿದೆ!
ಯಾರ ನಲಿವು ಲಾಸ್ಯಕೆಂದು ಇಲ್ಲಿ ಯುಗಳ ಶೋಕ ಗೀತೆ
ನಲಿವು ಹನಿಸಿದೆದೆಯ ಮೇಲೆ, ಮಸಿಯ ಚೆಲ್ಲಿ ಎರಡು ರೇಕೆ!

ನಿನ್ನ ಕವಿಯ ಹೃದಯದಲ್ಲಿ, ಉಂಟು ದಿವ್ಯ ಭಾವ ಜೋಗ
ಆದರಿಲ್ಲಿ ಶೂನ್ಯ ಭಾವ, ಅಮೆಯ ತುಂಬೊ ಮೌನರಾಗ
ಯಾವ ಬಾಳು ಬೆಳಗಲೆಂದು, ಇಲ್ಲಿ ಬರಿಯ ನೋವ ಕಂತು!
ಶಾಂತಿ ತೋರು, ಸುಖವ ನೀಡು, ಇಲ್ಲ ಕಡಿಯೊ ಜೀವ ತಂತು!!

       ರಚನೆ - ’ಸಂತ’ (ಸ.ಗು.ಸಂತೋಷ್)
       ತಾರೀಖು - ೦೧/೦೫/೨೦೦೯

ಕವಿತೆ: ಕಾವ್ಯ ಕನ್ನೆ










                 ಕಾವ್ಯ ಕನ್ನೆ


ಯೌವ್ವನದ ಹರವಿನಲಿ, ಗೊಂದಲದ ಮಡುವಿನಲಿ
ಸಂಶೋಧದ ರೋಗ, ಅಲೆಮಾರಿ ನಾನೀಗ!

ಕವಿ-ಕಾವ್ಯ ರಸದೊನ್ನೆ, ಏನೆನಲಿ ಈ ಕನ್ನೆ?!
ಹೇಗೆ ಆಗುವಳಿವಳು ಇಂದೆನ್ನ ಮನದನ್ನೆ?

ಎನ್ನೆ,
ನಿಜ! ಕಣ್ನೋಟಕೆ ಇಂದು, ನೀನೆ ಸುರಚೆನ್ನೆ!!
ಕವಿ ಕಣ್ಗೆ ರತಿ ರನ್ನೆ, ರಸಿಕಗೆ ಸವಿಬೆಣ್ಣೆ!!

ಆಗ,
ನಾಚಿ ಕೆಂಪೇರಿ ಅರೆಬಿರಿದು ಮಲ್ಲೆ ಮುಖ
ಆಗಿಬಿಡುವೆನು ಒಡನೆ ನಾನವಳ ಇಷ್ಟ ಸಖ

ಎನಲು,
ಕನಲಿ ಕೆಂಪೇರಿ, ಕೆರಳಿ ಸಿಡಿದಳಾ ನಾರಿ
ನುಡಿಯಲಿದ್ದುದೊಂದೆ ಆಗ ಕ್ಷಮಿಸಿ ರೀ!

ಕೊನೆಗೆ,
ಮೂಡಣದ-ಪಡುವಣದ ನೇಸರನು ಚಂದ
ನಮಗೆ ಅವನಿಗೆ ಬರಿಯ ಕವಿ-ಕಾವ್ಯ ಬಂಧ!

ಅರಿತೆ, 
ಅಂತೆಯೆ ಚೆಲುವೆ ನಮ್ಮಿಬ್ಬರ ಸಿರಿನಂಟು
ಎನ್ನ ಕಾವ್ಯದಿ ಮಾತ್ರ ಇನ್ನು ನೀನುಂಟು!!


ರಚನೆ - ಸಂತ (ಸ.ಗು.ಸಂತೋಷ್)
ತಾರೀಖು - ೧೪/೧೧/೦೭

ಕವಿತೆ: ಕವಿಯ ಅಳಲು

             ಕವಿಯ ಅಳಲು

ಕವಿಯ ಬಾಳು ಬಯಸಿ ನಿಂತೆ ನನ್ನ ನುಡಿಯ ಪಥದಲಿ
ದೊರೆತುದದಕೆ ಶೂನ್ಯ ಮೌಲ್ಯ, ಇಲ್ಲಿ ಜಗದ ಮತದಲಿ!

ಭಾವ ಬಿಂದು, ಕವನ ಸಿಂಧು! ನಿಸ್ಸಾರವಿಂದು ಇಲ್ಲಿಗೆ
ಸುಧೆಯೊ, ನಿಧಿಯೊ, ಬಾಳ ಛವಿಯೊ, ಕೊನೆಗೆ ಎಲ್ಲ ಗಲ್ಲಿಗೆ
ಪ್ರೇಮ ಕೂಡ ಇದರ ಸಲ್ಲ! ದೈವ ಮೊದಲೆ ಗಾಳಿಗೆ!
ನಲವು-ಗೆಲವು ಹೊಸತು ಎಲ್ಲ! ಕೆಲವು ನಫೆಯ ತೋಳಿಗೆ!

ಮತಿಯ ಗತಿಯು ಇಲ್ಲವಿದಕೆ, ಎನುವ ಕೊರಲು ಕೂಗಿಗೆ!
ತೂಗಿತೆಲ್ಲ ಕುರಿಯ ಮಂದೆ, ಅರಿವ ತೊರೆದು ಮೋಜಿಗೆ!
ಹುಚ್ಚು-ನೆಚ್ಚು ನೀತಿಯದುವೆ, ಕುರುಡು ಬಾಳ ದೀವಿಗೆ!
ನಾಡು-ನುಡಿಯ ಮರೆಯೆ ರೀತಿ, ಅಳಲು ನಾಡ ದೇವಿಗೆ!

ಬರೆವೆನೆಂಬೆ, ನುಡಿವೆನೆಂಬೆ, ಮನವದಾವು ಕೇಳದು!
ಭಾಷೆಗೆಂದೆ, ನಾಡಿಗೆಂದೆ, ಎದೆಯದಾವು ಮಿಡಿಯದು!
ಕವಿಯ ಬಾಳು ಬಯಸಬೇಡ ನಿನ್ನ ನುಡಿಯ ಪಥದಲಿ!
ಇರುವುದದಕೆ ಶೂನ್ಯ ಮೌಲ್ಯ, ಇಲ್ಲಿ ಜಗದ ಮತದಲಿ!
                           ರಚನೆ:’ಸಂತ’(ಸ.ಗು ಸಂತೋಷ)
                              ತಾರೀಖು: ೨೦/೦೭/೦೫

ಕವಿತೆ: "ಜೋಗಿ"

    "ಜೋಗಿ"

ಬಂದ ಬಂದ, ಈಗ ಬಂದ, ಸುದ್ದಿ ಮಾಡಿದ "ಜೋಗಿ"!
ನಾಟ್ಯ "ಶಿವ"ಗೆ "ಪ್ರೇಮ್‍"ಅ ದರ್ಶನ ಹಿಡಿದು ಹಾಡಿದ ಯೋಗಿ!
ಎತ್ತ ನೋಡಿದರತ್ತ ಜೋಗಿ, ಜನಜಾತ್ರೆ ಬೆಳೆದು, ಬೆಳೆದು ಸಾಗಿ!
ಮೆಚ್ಚಿನ ಮಳೆ! ಕೆಚ್ಚಿನ ಹೊಳೆ! ನೆಚ್ಚಿನ ಕಳೆ! ಹೊಳೆದು ಮಾಗಿ!

ನಾಡಿನೆಲ್ಲೆಯ ಮೀರಿ, ಏರಿ, ಹೃದಯ-ರಂಗದೆ ನಲಿದು ತೂಗಿ!
ಅವರು ಇವರು ಎಲ್ಲ ಬಾಗಿ, ಮೌನವಾಗಿ! ಗೆದ್ದನೀ ಕರುನಾಡ ನೇಗಿ!
ಮನಮಂದಿರವು ತುಂಬಲಿಂದು,"ಜೋಗಿ ಜಾತ್ರೆ"ಗೆ ಎಲ್ಲ ಮುಂದು!
"ನಾನು ನೋಡುವೆ, ಮೊದಲು ನೋಡುವೆ!", ಹಿಂದಿರದ ಸ್ಫೂರ್ತಿ ಬಂದು!

ಹೊಸತು ದಾಖಲೆಯೆನಿತೊ ಇಂದು! ಕರುನಾಡ ಮಡಿಲಿಗೆ ಕೀರ್ತಿ ಸಂದು,
"ಆಪ್ತಮಿತ್ರ"ನೀ ಜೋಗಿ ಇಂದು! ಶ್ರೀಗಂಧ ಗುಡಿಯ ಸಿರಿಯ ಸಿಂಧು!
ಹರಡಲೆಲ್ಲೆಡೆ ಜೋಗಿ ಜ್ವರವು, ಬಯಕೆ ಮೂಡಿತು ಮನದಲಲ್ಲಿ
ಹಮ್ಮಿನ ನೆರೆಹೊರೆಗಳೀಗ, ನಿಜ ಸೋತು ಬೇಡುವ ಕೈಗಳಿಲ್ಲಿ!

ಮೋಡ ಮುಸುಕು ಸರಿಯಿತೀಗ, ಕನ್ನಡದ ಗರಿಮೆ ತಿಳಿಯಿತೀಗ,
"ಜೋಗಿ"ಯೆ ನವ ಯುಗದ ಯೋಗ! "ಜೋಗಿ"ಯೆ ನವ ಭಾವ ಜೋಗ!


                             ರಚನೆ  - ಸಂತ (ಸ.ಗು.ಸಂತೋಷ್)
                                    ತಾರೀಖು - ೨೩/೦೮/೦೫

ಕವಿತೆ: ನಾಡಳಲು!!

               ನಾಡಳಲು!!
ಕರುನಾಡ ತಾಯಿಯೆ ನಿನ್ನ ಕುಡಿಗಳ ಎಂಥ ಕೃತ್ಯ ಕರ್ಮ!
ಹೊರನಾಡ ಮೋಹಕೆ ತಮ್ಮ ತನಗಳ ಕೊಂದ ಭೃತ್ಯ ಮರ್ಮ!

ಮಡಿಲಲ್ಲಿ ಪುಟ್ಟಿ, ತಾವ್ ಬೆಳೆದು ನಿಂತು, ’ಪರಪುಟ್ಟ’ ಆದರಿಲ್ಲಿ!
ಜಗವನ್ನು ಸುತ್ತಿ, ಬಾಳ್ ಬೆಳಗೆ ಇಂದು, ಹಿತ್ತಲನೆ ಕಿತ್ತರಿಲ್ಲಿ!

ನುಡಿಯಲ್ಲಿ ಅನ್ಯ, ಬಾಯ್ ತೆರೆಯೆ ಸಾಕು, ತಾಯ್ನುಡಿಯೆ ಕೇಳದಿಲ್ಲಿ!
ತೆರೆದಲ್ಲಿ ಅನ್ಯ, ಕಣ್ ಹೊರಳೆ ನೋಡು, ತಾಯ್ತನವೆ ಕಾಣದಿಲ್ಲಿ!

ಹಣಕಣದೆ ಸತ್ತು, ಸವೆಸಿಹರು ತಮ್ಮ ನಿಸ್ಸಾರ ಬದುಕಿನಲ್ಲಿ!
ಹಗೆಢಗೆಯ ಹೊತ್ತು, ಮರೆತಿಹರು ಎಲ್ಲ, ದುಸ್ಸಾರ ಕವಲಿನಲ್ಲಿ!

ನಮ್ಮಲ್ಲೆ ಅನ್ಯ, ಜೊತೆ ಸಾಗೆ ತಿಳಿವೆ, ಬಾಂಧವ್ಯ ಹೋಯಿತಿಲ್ಲಿ!
ತಮ್ಮೆಲ್ಲ ಅನ್ಯ, ಮತಿ ಜಾರಿ ಅಳಿವ, ದುರ್ದುಶೆ ಮೂಡಿತಿಲ್ಲಿ!

ಕುರುಡಲ್ಲಿ ಇರ್ಪ, ಪುರುಡಲ್ಲಿ ಇರ್ಪ, ಜನರೆನಿತು ಆದರಿಲ್ಲಿ!
ತಮ್ಮೆಲ್ಲ ಇರ್ಪ, ಹಮ್ಮಲ್ಲೆ ಇರ್ಪ, ಹುಂಬರು ಮೊಳೆತರಿಲ್ಲಿ!

ಎಲ್ಲಿರುವೆ ತಾಯೆ?! ಬಾರೆ ಬಾ ತಾಯೆ, ಇಳಿದಿಳೆಗೆ ಬಾರೆ ಬಾ!
ಕೈ ಹಿಡಿದು ನಡೆಸು, ಅಜ್ಞಾನ ಅಳಿಸು, ಸುಮತಿಯ ಬೆಳಗು ಬಾ!

ಕೆಚ್ಚೆದೆಯ ತರಿಸು, ಕನ್ನಡವ ನುಡಿಸು, ಸದ್ಭಾವ ಹರಿಸು ಬಾ!
ಕರುನಾಡ ಉಳಿಸು, ಕರ್ನಾಟ ಬೆಳೆಸು, ಶೃಂಗಾರ ಮೆರೆಸು ಬಾ!

ತಿಳಿದಾಗ ಧನ್ಯ ಋಣ ಧರ್ಮ ಮರ್ಮ, ಅಮೃತವೆ ಹರಿವುದಿಲ್ಲಿ!
ಬೆಳೆದಾಗ ಧನ್ಯ ನುಡಿನಾಡ ಕರ್ಮ, ಸಗ್ಗವೇ ಬುವಿಯಲಿಲ್ಲಿ!

                                ರಚನೆ: ’ಸಂತ’(ಸ.ಗು ಸಂತೋಷ್)
                                             ತಾರೀಖು: ೦೧/೦೮/೦೫

ಕವಿತೆ: ಸವಿನೆನಪು

               ಸವಿನೆನಪು

ಆಹಾ! ಎಂಥ ದಿನಗಳು, ಮರೆಯಲಾಗದ ಚಣಗಳು
ಮೂರು ವರ್ಷದ ಬಾಳಲಿ, ಭಾಗ್ಯನಗರದ ಬಳುವಳಿ

ನೃಪತುಂಗ ಓದು, ಹೊರನಾಡ ಬಾದು
ಏರಿಳಿತ ತೂಗು, ಹೊಸತನದ ಸೋಗು
ಛಲಘನದ ಜೋಗು, ತಂತನದ ಮಾಗು
ಮನೆಯಲ್ಲಿ ಮೋಪು, ಗುರುದೈವ ಕಾಪು... ಕಂಡುದಲ್ಲಿಯೆ ನಾನು

ಕೆಳೆಕೂಟ ನಲವು, ಪಾಠಾಟ ಸೊಗವು
ಓದಿನಲಿ ಯಶವು, ನೇಹದಲಿ ಜಸವು
ಕರುನಾಡ ವರವು, ಕನ್ನಡದ ಚೆಲುವು
ಎಲ್ಲೆಲ್ಲೂ ಗೆಲುವು, ಊರೆಡೆಗೆ ಒಲವು...   ಕಂಡುದಲ್ಲಿಯೆ ನಾನು

ತುಂಟರಿನ ಸಂತೆ, ತರಲೆಗಳ ಕಂತೆ
ಹದಿಹರಯ ತಳಕು, ಬಿಸಿಕಾಯ ಚಳಕು
ಒಮ್ಮೊಮ್ಮೆ ತೊಡಕು, ಒಮ್ಮೊಮ್ಮೆ ಕೆಡುಕು!
ಬದುಕಿನ ಹುಡುಕು, ಗೆಳೆತನದ ಬೆಳಕು..     ಕಂಡುದಲ್ಲಿಯೆ ನಾನು

ಓದೆನ್ನೆ ನವನೀತ, ಜಸದಲ್ಲಿ ವಿನೀತ
ಸಾಹಿತ್ಯ ಸಂಗೀತ, ಮನೆಮನದಿ ಸುನೀತ
ಮನದನ್ನೆ ರತಗೀತ, ನೇಹದಲಿ ಪುನೀತ
ಓಜರ್ಗೆ ಸುಪ್ರೀತ, ಬಾಳೆಲ್ಲ ಸಂಪ್ರೀತ...    ಕಂಡುದಲ್ಲಿಯೆ ನಾನು

                                   ರಚನೆ: ’ಸಂತ’(ಸ.ಗು ಸಂತೋಷ)
                                              ತಾರೀಖು: ೧೭/೦೮/೦೫

ಕವಿತೆ: ಸೃಷ್ಟಿ-ಸರಿಸಮ ದೃಷ್ಟಿ

   ಸೃಷ್ಟಿ-ಸರಿಸಮ ದೃಷ್ಟಿ


ನಗಿಸೆ ನಗುವವನೊಬ್ಬ, ನಗುವ ಮರೆತವನೊಬ್ಬ
ನಗಿಸಿ ನಗುವವನೊಬ್ಬ, ನಕ್ಕು ನಗಿಸುವನೊಬ್ಬ
ನಗದೆ ನಗಿಸುವನೊಬ್ಬ, ನಗಿಸಿ ನಗದವನೊಬ್ಬ
ನೀನೊಬ್ಬ, ನಾನೊಬ್ಬ, ಇವನೊಬ್ಬ, ಅವನೊಬ್ಬ, ಒಬ್ಬಬ್ಬನೂ ಒಬ್ಬ!

ಜೀವ ಜಾತ್ರೆಯ ಖುಷ್ಕಿ, ಭಾವ ಭಾವದ ವೃಷ್ಟಿ
ಎಲ್ಲ ದೈವದ ಸೃಷ್ಠಿ, ಅನಂತ ಮರ್ಮದ ಸೃಷ್ಟಿ
ಬಿಡಿಸು ಬಿಗಿದಿಹ ಮುಷ್ಟಿ, ಮನಸು ಹಿಂಡುವ ಮುಷ್ಟಿ!
ಕುರುಡು,ಪುರುಡನು ದೂಡು, ತೋರು ಸರಿಸಮ ದೃಷ್ಟಿ, ಕಾಣುವುದು ಸಂತುಷ್ಟಿ!

ತಿಳಿಯಬೇಕಿದೆ ಬದುಕು, ಮನಸು ಮನಸಿನ ತೊಡಕು
ಬಯಸ ಬೇಡವು ಕೆಡಕು, ಬೇಡ ಸಲ್ಲದ ದುಡುಕು
ಎಲ್ಲ ಮೀರಿದ ಹೋಕು- ’ನಾನು’, ’ನನ್ನದು’ ಸಾಕು
ಶಾಂತಿ-ಸ್ನೇಹದಿ ಬಾಳು, ನಿತ್ಯ ಕಾಣ್ವುದು ಬೆಳಕು, ಹೊಂಬಾಳಿನ ತಳಕು!

                               ರಚನೆ - ’ಸಂತ’ (ಸ.ಗು.ಸಂತೋಷ್)
                                       ತಾರೀಖು - ೨೯/೧೦/೨೦೦೫

ಕವಿತೆ: ಸೇರುವೆನು ನಿನ್ನ...!

                 ಸೇರುವೆನು ನಿನ್ನ...!

   ಎಲ್ಲೇ ಇರು ನೀ ಸೇರುವೆನು ನಿನ್ನ
   ನೀನಿರೆ ಜೊತೆಯಲ್ಲಿ ಬಾಳಾಗ ಚೆನ್ನ

ಮುಸ್ಸಂಜೆ ಬಾನಿಗೆ ಚೆಲ್ಲಿದ ರವಿ ಕೆಂಪು
ಆ ಸೊಬಗ ಪೆಂಪಿನಲಿ ರಾಗರತಿಯ ಜೊಂಪು
ನಲಿದುಲಿದು ಹಾರುತಿರೆ ಗೂಡಿಗೆ ಗಿಳಿ ಗುಂಪು
ಆ ಸೊಗದ ಎಲರಲ್ಲಿ ನಿನ್ನದೆ ಕಂಪು!

ಮೇಘ ಮಂದಾರವದು ಇಳೆಗಿಳಿಯೆ ನೋಡು
ಹುಣ್ಣಿಮೆಯ ಚಂದಿರನ ಜೊನ್ಮಳೆಯ ಹಾಡು
ಬೃಂದಾವನದಲ್ಲಿ ಚೆಲುವೊಲವಿನ ಹೊಂಪು
ಬಯಸಿದೆ ಮನವೀಗ ನಿನ್ನೊಡಲ ಸೊಂಪು!

ಗಾಳಿಗೋಪುರ ಕಟ್ಟಿ ಅಂದು ಅಗಲಿ ನಿಂತೆ
ಕನಸೆಲ್ಲ ಕರಗಿತು, ಬಾಳೆಲ್ಲ ಚಿಂತೆ
ನೆನಪಿನ ಕಡಲಲ್ಲಿ ತೇಲಿ ಮನವೀಗ
ತವಕಿಸಿದೆ ಬಾ ನೀರೆ, ಮರುಮಿಲನಕೆ ಬೇಗ!

ಮುಂಜಾನೆ ಆಗಸಕೆ ರವಿ ಕಾಂತಿ ಜಳಕ
ಜಗ ಮಿಂದು ಅದರಲ್ಲಿ ಮೈಮನಕೆ ಪುಳಕ
ಹೂಬನದಿ ಹೊಸ ಚಿಗುರು, ಬಂದಿತು ಹೊಸ ನೀರು
ಸೇರುವೆವು ಮತ್ತೊಮ್ಮೆ ಮೊಳೆಯುವುದು ಬೇರು!

                                ರಚನೆ - ’ಸಂತ’(ಸ.ಗು.ಸಂತೋಷ್)
                                ತಾರೀಖು - ೨೫/೦೫/೦೫

ಕವಿತೆ: ಸ್ಟುಟ್ಗಾರ್ಟಿನಲ್ಲಿ ಮನೆಯೂಟ

      ಸ್ಟುಟ್ಗಾರ್ಟಿನಲ್ಲಿ ಮನೆಯೂಟ


ಬೇಸಿಗೆಯ ಚಳಿಯಲ್ಲಿ, ಬೆವರೆಡೆಯ ಮಳೆಯಲ್ಲಿ
ನೆನೆನಡುಗಿ ಸಂಜೆಯಲಿ, ಮನೆಯೆಡೆಗೆ (ಉ)ಬಾನಿನಲಿ
ಸುನೀಲನ ಮನೆಯೆಡೆಗೆ, ಸ್ವಾಗತದ ಸಲಿಗೆಯಲಿ
ಕರುನಾಡ ಸವಿಯೂಟ, ಮನೆರುಚಿಯ ತವಕದಲಿ!

ತ್ರಿಮೂರ್ತಿ ತಲುಪಿದೆವು ಸಂಜೆ ಏಳರ ಹೊತ್ತು
ದಂಪತಿಗಳ ಮನೆಯಲ್ಲಿ ಮೊದಲಿರದ ಗೆಲುವಿತ್ತು
ನಗೆನಲವು ಮೊಗದಲ್ಲಿ ನೆಮ್ಮದಿಯ ಉಸಿರಿತ್ತು
ತಾಯ್ನುಡಿಯ ಜೇನೆನ್ನೆ, ಚಣದೆ ಘಂಟೆ ಕಳೆದಿತ್ತು

ಅಕ್ಷಯನ ಆಗಮನ, ಕೂಟ ಬೆಳಗಿತು ಮತ್ತು
ರಸಹಣ್ಣು ಆಸ್ವಾದ, ಜಿಗಿದು ಧ್ವನಿಸಿತು ಕತ್ತು
ಪಾಟೀಲನಾವೇಗ ಮದುವೆ ಮಹಿಮೆಯ ಬಿತ್ತು
ಸವಿಗಾನ ಆಲಿಸುತ, (ಅತ್ತಿತ್ತ) ಮಾತು ಹರಿದಿತ್ತು

ಪ್ಯಾರಿಸ್ಸು, ವೆನ್ನೀಸು, ಸೊಬಗು ಸಂಭ್ರಮದ ಮಾಟ
ನೋಡುತಲಿ, ಆಡುತಲಿ, ಮೆರೆಯಿತನುಪಮ ಕೂಟ
ಮಾತಿಗಿಳಿದರೆ ಇನಿತೆ, ಕಲೆತು ಜಗ ಮರೆವ ಪರಿಪಾಟ
ಜಠರ ಮುನಿಯಲೆ ಅರಿವು, ನಿಜ ಬೇಕಲ್ಲ ಸವಿಯೂಟ

ಹೊತ್ತಾಗೆ ಒಂಬತ್ತು ಘಮಘಮಿಪ ರಸಕವಳ
ತುಂಬೆದೆಯ ಅಕ್ಕರೆಯು, ಕರಮುಗಿದೆ ಮನಧವಳ
ಮನೆ-ಮಡದಿ ಸಹಬಾಳ್ವೆ, ಸಗ್ಗವದೆ, ಅತಿ ವಿರಳ
ಮೃಷ್ಠಾನ್ನ, ಸಿಹಿ, ಬಜ್ಜಿ, ನೆನಪಾಯ್ತು ನನಗವಳ!

ರುಚಿಯಾದ ಮನೆಯಡಿಗೆ, ಮೆಚ್ಚಿಗೆಯೆ ಅಡಿಗಡಿಗೆ
ಮಾಡಿದಾಕೆಗೆ ಉಳಿದಿಲ್ಲ, ಭಕ್ಷ್ಯವೆಲ್ಲವು ನಮಗೆ!
ಭೋಜನದ ಪರ್ವವದು, ಮರೆಯದ ಇರುಳೊಳಗೆ!
ಜೀವನದ ಮರ್ಮವಿದೆ, ತಿಳಿದಾಗ ಸುಖ ತಮಗೆ!

ಹತ್ತು ಕಳೆಯಲು ಹೊತ್ತು, ಹೆಜ್ಜೆ ಹಾಕಿತು ಚರಣ
ನೀಡಿದೆವು ಕರೆಯೋಲೆ, ಉತ್ತರಕೆ ಕಾತರಿಸಿ ಕರಣ
ಒಪ್ಪಿದರು ಕೊನೆಯಲ್ಲಿ, ನಮ್ಮ ಮನೆಯಲ್ಲಿ ಔತಣ
ಹರಸಿ ಕೊನೆಗೆಲ್ಲ ಶುಭರಾತ್ರಿ, ಮರಳಿ ಸಾಗಿತು ದಿಬ್ಬಣ!

                                  ರಚನೆ: ’ಸಂತ’(ಸ.ಗು ಸಂತೋಷ್)
                                             ತಾರೀಖು: ೦೭/೦೭/೦೫

ಕವಿತೆ: ಹರಿನಾಮ ಸ್ಮರಣೆ

                  ಹರಿನಾಮ ಸ್ಮರಣೆ

ಹರಿ...., ನಿನ್ನ ನಾಮದ ಸ್ಮರಣೆ ಮಾಡುತಲಿರೆ ಇಂದು
          ಪೇಳಲಾರೆ ಎನಿತು ಸುಖವೊ, ಅಸುಖ ಬಾಳಿನೊಳು!

          ಮಂತ್ರ ಮೊಳಗಿರೆ, ಧೂಪ ಕಂಪಿರೆ, ಹಣತೆ ಬೆಳಗುತಿರೆ,
          ಮುರುಳಿ ಮೋಹನ ವೇಣು ನಾದವು ಕರಣವ ತುಂಬುತಿರೆ,
          ಹೃನ್ಮನ ತಣಿಸುತ, ಭಾವ ಬೆಳಗುತ, ಸಂಧ್ಯೆಯು ನಲಿಸುತಿರೆ,
          ಪೇಳಲಾರೆ ಎನಿತು ಸುಖವೊ, ಅಸುಖ ಬಾಳಿನೊಳು!

          ಬಾಲ ಕೃಷ್ಣನ, ತುಂಟ ಕೃಷ್ಣನ, ಲೀಲೆಯ ಓದುತಿರೆ,
          ನಂದಗೋಪನ, ಯಶೋದ ಕಂದನ, ತೂಗುತ ಪಾಡುತಿರೆ,
          ಮುದ್ದು ಮೊಗವ, ಬೆಣ್ಣೆ ಮೂರ್ತಿಯ, ನೋಡುತ ನಲಿಯುತಿರೆ,
          ಪೇಳಲಾರೆ ಎನಿತು ಸುಖವೊ, ಅಸುಖ ಬಾಳಿನೊಳು!

          ಮಥುರ ವಂಶದ, ಕಂಸ ಧ್ವಂಸದ, ಚರಿತೆಯ ಕಾಣುತಿರೆ
          ಕಾಳಿಂಗ ಮರ್ದನ, ಗಿರಿ ಗೋವರ್ಧನ, ಕೀರುತಿ ಸಾರುತಿರೆ
          ಯೋಗ ಇಂದ್ರನ, ಪ್ರೇಮ ಲೀಲೆಯ, ಚಂದನ ಚೆಲ್ಲುತಿರೆ
          ಪೇಳಲಾರೆ ಎನಿತು ಸುಖವೊ, ಅಸುಖ ಬಾಳಿನೊಳು!

          ಕೌರವ ಪಾಂಡವ, ಬಳಗದ ಕಾಳಗ, ಭಾರತ ಕುಣಿಯುತಿರೆ
          ಬಾಳ ವ್ಯೂಹದ, ಗೀತ ಸಾರದ, ದರುಶನವಾಗುತಿರೆ
          ಮುಕ್ತಿ ಮಾರ್ಗವೆ, ಹರಿಯ ಸದನವೆ, ತೋರೆನೆ ಬಾಗುತಿರೆ
          ಪೇಳಲಾರೆ ಎನಿತು ಸುಖವೊ, ಅಸುಖ ಬಾಳಿನೊಳು!


                                 ರಚನೆ: ’ಸಂತ’ (ಸ.ಗು ಸಂತೋಷ)
                                              ತಾರೀಖು: ೨೬/೦೮/೦೫

ಪ್ರೇರಣೆ: ಆತ್ಮೀಯ ಗೆಳೆಯ ಸುಧೀರ್ ಜೊತೆ ಜರ್ಮನಿಯ ಸ್ಟುಟ್‌ಗಾರ್ಟ್‌ನಲ್ಲಿ ಗೋಕುಲಾಷ್ಟಮಿಯನ್ನು ಆಚರಿಸಿದ ಸವಿಕ್ಷಣಗಳ ಪ್ರೇರಣೆಯಿಂದ ಮೂಡಿದ ಕವನವಿದು.

ಕವಿತೆ: ನನ್ನ ತಾಯಿ

               ನನ್ನ ತಾಯಿ
ಅನುಜ, ಹೆತ್ತಳು ನನ್ನಮ್ಮ, ನವಮಾಸ ನನ ಹೊತ್ತು
ಸಾಕಿ ಸಲುಹಿ ಹಾಡಿದಳು, ಮೊಲೆಹಾಲ ಎನಗಿತ್ತು

ಮಮತೆ ತುಂಬಿದ ಒರತೆ, ಮನವೆಂದು ನನ ಸುತ್ತ
ಪ್ರೀತಿ, ಕರುಣೆಯ ಚರಿತೆ, ಜಗವೆ ಕಾಣದ ಜತ್ತು

ಗಂಡನಿಲ್ಲದ ಈಕೆ, ನಾ ಮಗುವು, ನೋವುಗಳು ಹತ್ತು
ಉಸುರಿದಳು ನನಗೆಂದೆ, ದಿನವು ತಾ ಬದುಕಿ ಸತ್ತು

ಹಸಿವ ಬೇಗೆಯದು ನನಗಿಲ್ಲ, ಹೊತ್ತೊತ್ತಿಗೂ ತುತ್ತು
ತಿಳಿಯೆ ನೀಡಿದಳು ಹೇಗವಳು, ಅವಳೊಪ್ಪತ್ತಿಗೂ ಕುತ್ತು

ನನ್ನ ನಲವಿನ ಸೊಗಸು, ಆಕೆಯ ಸೊಗ ಸೊತ್ತು
ತುಂಬಿದಳು ಮೈಮನಸು, ತನ್ನ ಚೆಲುವನೆ ತೆತ್ತು

ಜಗವಿರಿಯೆ ಮಾತಿನಲಿ, ಸೊರಗಿದಳು ಮನ ಅತ್ತು
ಹೊರನಗುತ ನಗಿಸುತ್ತ, ಎರೆದಳೆಲ್ಲವನು ತಾ ಬತ್ತು

ತಿಳಿವಿರದ ಬಾಳಿನಲಿ, ಬರಿಯ ಕತ್ತಲೆಯೆ ಗೊತ್ತು
ಅದಕಾಗಿ ಓದೆನಗೆ, ಹಲವು ಕನಸಿನ ಕೊತ್ತು

ಎನ್ನೋದು ಗೆಲುವುಗಳೆ ಅವಳಾಸೆ, ಛಲವನ್ನು ಬಿತ್ತು
ಸವೆಸಿದಳೆ ತನ್ನ ಹಗಲಿರುಳು, ಅನ್ಯವೆಲ್ಲವ ಕಿತ್ತು

ಕನಸೆಲ್ಲ ನನಸೆನಿಸಿ, ಬಂದಿರುವೆ ಜಯಿಸಿ ಈ ಹೊತ್ತು
ನಲಿವುಕ್ಕಿ, ಮನಹಿಗ್ಗಿ, ತಬ್ಬಿ ಸುರಿಸುವಳು, ತಾಯಿ ಕಣ್ಮುತ್ತು

ಇರಿತ, ಕೊರೆತಗಳು ಇನ್ನಿಲ್ಲ, ಬೇಗೆ ಬವಣೆಗೆ ಮಿಳ್ತು
ಶಾಂತಿ-ಸೌಖ್ಯವೆ ಇನ್ನೆಲ್ಲ, ಸೊಗಸೆ ಬಾಳಿಗೆ ಒತ್ತು

ಅವಳ ಋಣ ಶಕ್ತಿ, ಆ ಭಕ್ತಿ ಬದುಕಿರಲಿ, ಕರುಣಿಸು ಗುರುವೇ ಕೃಪೆಯಿತ್ತು
ಜನ್ಮ ಜನ್ಮಕು ಇವಳೆ ತಾಯೆನಗಿರಲಿ, ಹರಸೆನ್ನ ಗುರುವೇ ವರವಿತ್ತು!

                             ರಚನೆ: ’ಸಂತ’ (ಸ.ಗು ಸಂತೋಷ)
                                              ತಾರೀಖು: ೦೫/೦೬/೦೫

ಕವಿತೆ: ಶಾಸ್ತ್ರಿಯ ಕೊಡೆಯ ವಿಚಾರ

ರಮಾನಂದರ "ಕೊಡೆಯ ವಿಚಾರ"
ನೆನಪಿನಂಗದಿ ಲಾಸ್ಯವಲ್ಬತ್
ಶಾಸ್ತ್ರಿ ಪೇಳಿದ ಕತೆ ಎಮಗೆ ಚೋದ್ಯಮಂ ಮತ್ತಂ ದುಗುಡಮಂ ನೈಜಮಂ
ನೇಹಪೊನಲೊಳ್ ಮಾನಪೆಂಪನ್
ಕಂಡಿರೇನ್ ಬೆರಗಾದರೇನ್!
ಭಾಷೆ-ಭಾಷ್ಯದ ಪರಿಯ ಮೆಚ್ಚದಿರ್ದೊಡೆ ಬುಧಜನರ್ ಬಿನದಗೈವರುಂ

ಮಿತ್ರನ ಮಾತಿನಿಂ ಕೊಮೆಯಿತೇನ್
ದೇಹ, ತೆರೆದಿತಲ್ತೆ ಮನಗಣ್
ಓಷಧಿ ಕಹಿಯಿರ್ಕೆ ಅದ ಬಿಸುಟುವನೇನ್ ರೋಗಿ ಜಗದೊಳ್ ಪೇಳಿರ್
ಸ್ಥಿರಮಿಲ್ಲದೆ ಮನಗ್ಲಾನಿಸೆ
ಬೆಜ್ಜರಿಲ್ಲದೆ ಉಳಿವಿರ್ಪುದೇ
ಜಸಂಬಡದೀ ಗುಂಪು ಗೊಂಟಿರದೆ ಕಾಣ್ವುದು ಮಿಳ್ತುಮ್

ಮಿಹಿರನೋರ್ವನುಂ ನಭಕಿರಲ್
ಮಿಸುಪು ಕಾಣ್ವುದೆ ಕಳ್ಗಿರುಳಿನೊಳ್
ಚಂದ್ರತಾರೆಯಿದ್ದೊಡಮಲ್ತೆ ಸೊಗಸುಂ, ಪೊಳಪುಂ ಬಾನ್-ಬುವಿಯೊಳಿರ್ಕುಮ್
"ಕಹಳೆ" ಪುಟ್ಟಿದರಾಯ್ತೆ ಆರ್
ಪೋಷಿಸುವರಿದನ್ ಪೇಳ್ ಮಿತ್ರ
ಭಕ್ತಿಯುಂ ಎನಗೆಂದಿನಿತರ್ಚನೆ ಮಾಣ್ದೊಡೆ ಪೂಜೆಯೆನರ್ ಜಗದೊಳುಂ

ಶುಭವಾಗಲಿ,
ಇಂತಿ ನಿಮ್ಮ,
ಎಸ್.ಜಿ

ರಚನೆ: ಸಂತ(ಸ.ಗು.ಸಂತೋಷ)
ತಾರೀಖು: ೨೦೦೨

ಕವಿತೆ: ಕುಸಿದ ಮನ

          ಕುಸಿದ ಮನ


ಕುಸಿದುದೇತಕೊ ಇಂದೆನ್ನ ಮನಸಿನ.ಅ.ಅ... ಶಕ್ತಿ
ಎನಿಸಿತೊಮ್ಮೆಗೆ ಹೋಯಿತೆಲ್ಲಿ ಹಿಂದಿನೆನ್ನ.ಅ.ಅ.. ಯುಕ್ತಿ
ನೀಡಿದಿದುವೆ? ಜೀವನದಿ ನನ್ನ ಶ್ರದ್ಧಾ ಭಕ್ತಿ?!
ದೊರೆತಿದ್ದರೆ ಸೊಗಸಿತ್ತು ಈ ಬಾಳಿನಿಂ ಮುಕ್ತಿ

ಕಂಡ ಕನಸುಗಳೆಷ್ಟೊ ನಿಜ, ನನಸಾಗದೆ ನೊಂದಿರುವುದು ನಿಜ
"ಎಷ್ಟೋ ಬಾಳಿನಲಿ ನದೆದಿಹುದಿದೆ ಅರಿಯಬೇಕು ಮನುಜ"
ಎಂಬ ಮಾತಿನಮಾಲೆ ಕಟ್ಟುವರು ಹಿರಿಯರು, ಸಹಜ
ಕೊಮೆವ ಮನಕಿದರಿಮ್ ತಣಿವುಂಟೆ ಪೇಳೊ ನೀ ಅನುಜ

ತಾಯ್ನುಡಿಯ ಉಲಿದರೆ ಅಪಹಾಸ್ಯ - ಪರಕೆ(ಗೆ) ದಾಸ್ಯ!
ಶ್ರೀಸಾಮಾನ್ಯನ ಬಾಳು ನಡೆಸಿದರೆ ಮಾಂದ್ಯ - ಪೊಂದಾವರದ ಸ್ವಾಮ್ಯ!
ಸಂಸ್ಕೃತಿಯ ಸಲುಹಿದರೆ ವ್ಯಂಗ್ಯ - ಹೊಲಸದುವೆ ಸ್ವಾರಸ್ಯ, ವಂದ್ಯ!
ತಿಳಿತನವ ತೋರಿದೊಡೆ ಮೌಢ್ಯ - ದೈನ್ಯದುಂಬವೆ ಮಾನ್ಯ!

ಬಾಳನೌಕೆಯಲಿ ಬೇಕಂತೆ ಹಣದ ಒಣ ಬಿಗುಮಾನ
ಬೇರೆ ಬಗೆದ ಮರ್ತ್ಯನಿಗಿಲ್ಲಿಲ್ಲ ಇನಿತು ಸಮ್ಮಾನ
ವಿಧಿಗೆ ಬಲಿಯಾಗಿ ಉಳಿದಿರುವುದೀಗ ಬರಿಯ ಅಪಮಾನ
ನೈಜದಲು ನಲಿವಿಲ್ಲ, ಭ್ರಮೆಯೊಳು ಗೆಲುವಿಲ್ಲ, ಬರಿಯ ದುಮ್ಮಾನ!!

            ರಚನೆ - ಸಂತ (ಸ.ಗು.ಸಂತೋಷ)/೨೦೦೨

ಕವಿತೆ: ಮೃತ್ಯುಹೋಮ

        ಮೃತ್ಯುಹೋಮ

ಮುಸ್ಸಂಜೆಯ ಬಾಂದಳದ ಕೆಂಪು ಛಾವಣಿಯ ಅಡಿಯಲ್ಲಿ
ಬೋಳ್ ಮರಗಳ, ಕೆನ್ನಲರಿನ ನಿಬಿಡ ಕಾನನದಲ್ಲಿ
ಪ್ರಕೃತಿಯ ವಿಕೃತಿಗೆ ಸೆರೆಯಾದ ಭೂತಾಯಿ ಮಡಿಲಲ್ಲಿ
ನಡೆಯಲಿದೆ ಮೃತ್ಯುಹೋಮ, ಮನುಜತೆಯ ಮೃತ್ಯುಹೋಮ

ಮೇಳ ಕುಣಿತಗಳ ಗದ್ದಲದಿ ಕೂಡಿ ಹೊರಟಿದೆ ದಿಬ್ಬಣ
ಮೈಗೆ ಅರಿಶಿನ, ಕೊರಳಿಗೆ ಹೂಮಾಲೆ, ನವವಧುವಿನಾಭರಣ
ಅರಿತ ಇವರಿಗೆ ಸಂಭ್ರಮ, ಅರಿಯದ ವಧುವಿಗೂ ಸಂಭ್ರಮ
ನಡೆಯಲಿದೆ ಮೃತ್ಯುಹೋಮ, ಮನುಜತೆಯ ಮೃತ್ಯುಹೋಮ

ಹೊಳೆವ ಕೈಖ(ಕ)ಡ್ಗ, ಧೃಡ ಕಪ್ಪು ಕಾಯ, ವರನ ಮೈಮಾಟ
ಬಳಿ ಬಂದ ವರನಿವನು ಯಾರೋ? ವಧುವಿನ ಓರೆನೋಟ
ವರನ ಕೆಂಗಣ್ಣು ಹುಟ್ಟಿಸಿರೆ ಭೀತಿ, ಪ್ರಾರಂಭ ಓಟದ ಆಟ
ನಡೆಯುತಿದೆ ಮೃತ್ಯುಹೋಮ ಮನುಜತೆಯ ಮೃತ್ಯುಹೋಮ

ದಿಕ್ಕೆಟ್ಟು ಓಡುತಿಹ ವಧುವ ಹಿಡಿದೆಳೆವ ದುರ್ಜನರ ನಡುವಲ್ಲಿ
ಸಾವಿನ ನೋವು, ಪ್ರಾಣ ಪಕ್ಷಿಯ ಕೂಗು, ಹರಿಯುತಿಹ ಗಗನದಡಿಯಲ್ಲಿ
ಅಟ್ಟಹಾಸದ ಕೇಕೆ, ಬಾಳ ಮೌಲ್ಯದ ಬೇಟೆ, ಮೆರೆದಿಹ ಬುವಿಯಲ್ಲಿ
ನಡೆಯುತಿದೆ ಮೃತ್ಯುಹೋಮ, ಮನುಜತೆಯ ಮೃತ್ಯುಹೋಮ

ಸೋತು ತಲೆತಗ್ಗಿಸಿ ಕೊನೆಗೆ, ನಿಂತ ವಧುವಿನ ಕತ್ತು
ವರದೈತ್ಯನ ಖ(ಕ)ಡ್ಗ ಹೊಡೆತಕ್ಕೆ ಇಳೆಗುರುಳಿ ಬಿತ್ತು
ತಾಯಿ ಭುವನೇಶ್ವರಿಯ ಚೆಲುವ ಮನಸೀಗ ಒಡೆದ ಮುತ್ತು
ನಡೆದಿದೆ ಮೃತ್ಯುಹೋಮ ಮನುಜತೆಯ ಮೃತ್ಯುಹೋಮ

ಬಾಂದಳದ ಕೆನ್ಹೊನಲು ಧರೆಗೆ ದೊರೆತ ಬಳುವಳಿಯು
ದಯೆ-ಧರ್ಮ-ನೀತಿಯ ಸಾವು, ಕೆನ್ನಲರಿಗೆ ಚಂದನವು
ಪ್ರಕೃತಿಯ ವಿಕೃತಿಗೆ ಜರುಗಿದೆ ಮತ್ತಷ್ಟು ಸಿಂಗರವು
ನಡೆದಿದೆ ಮೃತ್ಯುಹೋಮ, ಮನುಜತೆಯ ಮೃತ್ಯುಹೋಮ

ಮೌಢ್ಯಾಂಧಕಾರದ ಕೃಪಾಕ್ಷಿ ಇರಲು ಜನರ ಮನಕಿಲ್ಲಿ
ತಲೆ ತಗ್ಗಿಸಿ, ಮನ ಕುಗ್ಗಿಸಿ ನಡೆವ ವಧುವೃಂದ ಬದುಕಿಸತ್ತಿದ್ದಲ್ಲಿ
ದೌರ್ಜನ್ಯ,  ದುರ್ವ್ಯಸನ, ವೈಧರ್ಮದ ವಿಷಪ್ರಾಶನ ನಿಲ್ಲದಿದ್ದಲ್ಲಿ
ಜ್ಞಾನಿಗಳ, ಧರ್ಮಯೋಗಿಗಳ ಶಾಂತತೆಯು ಕ್ರಾಂತಿಯಾಗದಿದ್ದಲ್ಲಿ
ನಡೆವುದು ಮೃತ್ಯುಹೋಮ ಮನುಜತೆಯ ಮೃತ್ಯುಹೋಮ.

            ರಚನೆ - "ಸಂತ" (ಸ.ಗು.ಸಂತೋಷ್)
            ದಿನಾಂಕ - ೦೬/೦೬/೦೨

ಕವಿತೆ: ...ನಲ್ಲೆನ್ನ ಸಾಹಿತ್ಯಲೋಕ ಹೀಗೇಕೆ?

...ನಲ್ಲೆನ್ನ ಸಾಹಿತ್ಯಲೋಕ ಹೀಗೇಕೆ?

ನನ್ನ ಸಾಹಿತ್ಯಲೋಕದ ಪರಿಯು ಹೀಗಾಗಿರುವುದೇಕಿಲ್ಲಿ?

ಹೊಮ್ಮುವುದು ನವಹುರುಪು ಒಮ್ಮೊಮ್ಮೆ ಬರಡಂತರಾಳಾದಲಿ
ಅದುವೆ ಬೈಗಿನಲಿ, ನಿಸಾರರ ಕವನಗಳ ಸವಿಸಾರದಲ್ಲಿ
ನಾಲ್ಕು ಪದಗಳ ಬರೆವೆ ಕಗ್ಗತ್ತಲ ಭವಿಷ್ಯವದಲ್ಲಿ
ಜಾರಿ ಬೀಳುವುದು ಬರವಣಿಗೆ, ಕವಿತೆ ಕನಸಾಗುವುದಲ್ಲಿ!

ಮುಂಜಾನೆ ನೇಸರನು, ಹುಣ್ಣಿಮೆಯ ಚಂದಿರನು ಎನಗೆ ಸ್ಫೂರ್ತಿಯು ಅಲ್ಲಿ
ಶಶಿ-ರವಿ-ತಾರೆಗಳ ಭೇದ ಕಾಣದ ಕುರುಡ ಕಬ್ಬಿಗನು ನಾನಿಲ್ಲಿ!
ಪ್ರಕೃತಿಯ ಮೈಚೆಲುವ, ಯೌವ್ವನದ ಸಿಹಿ ಒಲವ, ಬಣ್ಣಿಸಿದ  ರಸಕವಿಯಲ್ಲಿ
ಚೆಲುವು-ಒಲವುಗಳ ಕಾವ್ಯರಸ ತಿಳಿಯದ ನಿರ್ಜೀವಿ ಜೀವಿ ನಾನಿಲ್ಲಿ!

ಕರ್ಣ-ದೃಶ್ಯಾನಂದ, ಕಂಪು-ಪೆಂಪಿನ ಗಂಧ ಅನವರತ ಅಲ್ಲಿ
ಮುಪ್ಪಿನ ಜಡವೋ, ಬೆಪ್ಪಿನ ತೆರವೋ,  ಎನ್ನ ಪಂಚೇಂದ್ರಿಯಗಳಿಲ್ಲಿ!
ಹೊಸ ದಿಕ್ಕು - ಹೊಸ ಹುತ್ತು - ಹೊಸ ರಚನೆ ಅನುದಿನವು  ಅಲ್ಲಿ
ದಿಕ್ಕೆತ್ತ, ಮತಿಸತ್ತ ರಚನಾಲೋಚನೆಯು  ಎನದೀಗ ಇಲ್ಲಿ!

ಎನ್ನ ಕವನದ ಪೆಂಪು- ಕಸ್ತೂರಿ ಕನ್ನಡದ ನರುಗಂಪಿನಲ್ಲಲ್ಲಿ
ಕವನ ಕನ್ನಡಿಯಲೆನ್ನ ಕನ್ನಡಿಯ ದಿವ್ಯದರುಶನವದದೃಶ್ಯವಿಲ್ಲಿ!
ರಂಗು  ರಂಗಿನ, ಹೊಳಪು ಥಳುಕಿನ ವಸ್ತ್ರವಿನ್ಯಾಸ ಕವನಗಳಿಗಲ್ಲಿ
ಭಾವಸಾರವಿಲ್ಲದ ನಿಸಾರ ನಗ್ನತೆಯು ಎನ್ನ ರಚನೆಯದಿಲ್ಲಿ!

ರಚನೆ - "ಸಂತ" (ಸ.ಗು.ಸಂತೋಷ)
ದಿನಾಂಕ - ೨೯/೦೫/೦೨

ಕವಿತೆ: ನಿನ್ನ ಮೊದಲ ಪತ್ರ ಕಂಡಾಗ

           ನಿನ್ನ ಮೊದಲ ಪತ್ರ ಕಂಡಾಗ

ಓ ಗೆಳತಿ,
  ಆರು ವರುಷದ ಕಾಲ ಕಂದಕಕೆ ಸೇತುವೆಯು,
  ಇಂದು ನೀ ಎನಗೆ ಕಳುಹಿದ ಸ್ನೇಹದ ಓಲೆ

  ಆಶ್ಚರ್ಯ, ಸಂತೋಷ, ನವಹರುಷ ಸಿಂಚನವು,
  ನೆನಪಿನಂಗಳವದು ಈಗೆನ್ನ ಬೆಳದಿಂಗಳ ಬಾಲೆ!

  ಅಲ್ಲಿ ಹೈದರಾಬಾದಿನಲಿ, ಹತ್ತರಲಿ, ವಿದ್ಯುದ್ಧದಲಿ ನನ್ನೆದುರು ನೀನು,
  ನಿನಗೆನ್ನ ಮೊದಲ ಸ್ಥಾನವ ಬಿಡದೆ, ಮೊದಲೆನಗೆ ನೀ ಬಿಟ್ಟುಕೊಡದೆ,
  ನಡೆದ ಹಣಾಹಣಿಯ ರೋಮಾಂಚನ, ಈ ಪತ್ರಮಿಂಚಿನಲಿ

  ಆಗಸ್ಟ್ ತಿಂಗಳ ಮಳೆಯ ಚಳಿಯಲ್ಲೂ ನಾ ಬೆವತ ದಿನವು,
  ನೀ ಎನ್ನ ಮೊದಲು ಕಸಿದು ಎಲ್ಲರ ಬೆರಗುಗೊಳಿಸಿದ ಚಣವು,
  ಮುಂದೆಲ್ಲ ಜಯಿಸಿ ನಾ ಮೆರೆದ ಬಿಂಬ, ಈ ಪತ್ರಗನ್ನಡಿಯಲಿ

  ವೇದಾವತಿಯವರ ಮನೆಯಲ್ಲಿ,  ಮಾತಿನ ಚಕಮಕಿಯಲ್ಲಿ,
  ಸಾಹಿತ್ಯ ಮಂದಿರದ ಚದುರಂಗದಾಟ, ನಮ್ಮಿಬ್ಬರಲ್ಲಿ
  ನಿನ್ನ ಸೋಲಿಸಿ ಗೆದ್ದ ಹೆಮ್ಮೆಯ ಸುಧೆಯು, ಈ ಪತ್ರಧಾರೆಯಲಿ!

  ಗುರುವರೇಣ್ಯರ ನುಡಿಯಲ್ಲಿ ಎಂದಿಗೂ ನಾವೆರಡು ಮುತ್ತು,
  ನೃಪತುಂಗ ಶಾಲೆಯ ಕೀರುತಿಯ ನಾವು ಬೆಳಗುವ ಕನಸಿತ್ತು.
  ಆ ದಿವ್ಯದೇಗುಲದ ಸ್ಫುಟ ಕಥೆಯು - ಈ ಪತ್ರಗಾನದಲಿ!

  ಜೀವನದ ಹಾದಿಯಲಿ ಸುಖ-ದುಖಗಳು ಸಮಸಮವು,
  ಅಂತೆಯೆ ಆ ಬಾಳಿನಲು ಕೂಡ ಹಲವಾರು ಸಿಹಿ-ಕಹಿಯು,
  ಆ ನಮ್ಮ ಬಾಳಿನ ವರ್ಣ-ವೈಚಿತ್ರ್ಯ, ಈ ಪತ್ರಚಿತ್ರದಲಿ

  ಇಂದು ನಾ ಎಲ್ಲೋ, ನೀ ಎಲ್ಲೋ, ದೂರ ಬಹುದೂರ
  ಆದರೂ ನಮ್ಮಿಬ್ಬರ ಸೇರಿಸಿದೆ, ಈ ಓಲೆಯ ಮಾಲೆ
  ನಮ್ಮಿಬ್ಬರ ನಡುವಿರಲಿ ಸ್ನೇಹಸ್ಪಂದನ, ಗೌರವದ ಚಂದನ
  ಆಶಿಸುವೆ -ಸದಾ ಬರೆವೆ ಹೀಗೆಯೆ - ಎನ್ನ ಮಿನುಗುತಾರೆಯೆ!

            ರಚನೆ - ಸಂತ (ಸ.ಗು.ಸಂತೋಷ್)
            ದಿನಾಂಕ - ೦೨/೦೬/೦೨

ಕವಿತೆ: ಚಿನ್ನದಾಯಣ

             ಚಿನ್ನದಾಯಣ

ಸಂಜೆ ಆರರ ಸುಮಾರಿಗೆ, ಎಂದಿನಂತೆ ನಾನು
ನನ್ನ ಮೋಟಾರ್ ಬೈಕಿನಲಿ, ಆಫೀಸಿನಿಂದ ಬಂದೆ ಮನೆಗೆ

ಪಕ್ಕದ ಮನೆಯ ಅಂಗಳದಲ್ಲಿ ಹೆಂಗಸರ ಗುಂಪು!
"ಹೌದಾ!","ಚೆನ್ನಾಗಿದ್ರಿ!","ಎಷ್ಟಾಯ್ತು?","ಎಲ್ಲಿ?"
ಹೀಗೆ ಇನ್ನೂ ಹತ್ತಾರು..; ಬೀದಿಗೇ ಕೇಳಿಸಿತು!

ಅಷ್ಟರಲಿ ಇನ್ನೊಂದು ಅಚ್ಚರಿ! ಗೇಟ್ ಬಳಿ ನನ್ನಾಕೆ!

ಟಿ.ವಿ. ನೋಡುತ್ತಲೋ, ಮಲಗು ಕೋಣೆಯ ಮೇಜಿನ ಮುಂದೆ ಶೃಂಗಾರ ನಡೆಸುತ್ತಲೋ  ಇರಬೇಕಾದವಳು ಏನಿಲ್ಲಿ?!

ಹಲ್ಲೆಲ್ಲ ತೋರಿಸುತ ಗೇಟನ್ನು ತೆರೆಯಲು,
ನಾನು ನಕ್ಕೆ ಅಮ್ಮಾವ್ರು ಮುನಿದರೆ ಎಂದು!

ಒಳಗೇ ಶಂಕೆ??????

ಮನೆಯೊಳಗೆ -
  "ಪಕ್ಕದ ಮನೆ" ಎನ್ನುವಷ್ಟರಲ್ಲಿ ಅಮ್ಮನವರ ಸರದಿ
  "ನೀರು ಬೇಕೆ?" "ಕಾಫಿ ತರಲೆ?"
  "ಅಪರೂಪದ ಸೇವೆ" ಬೇಡವೆಂದರೆ ನಾ ಮೂರ್ಖ,
  "ತಾ" ಎಂದೆ.
  ಸರಸರನೆ ಅಲ್ಲಾದ್ದೀನನ ಜಿನ್ನಂತೆ ತಂದಿಟ್ಟಳು
  ಆಶ್ಚರ್ಯ ಮತ್ತೆ! ಕಾಫಿಯ ಜೊತೆ ಬಿಸಿಬಿಸಿ ಆಂಬೊಡೆ
  ಕಣ್ಣೆತ್ತಿ ನೋಡಿದೆ, "ನಿಮಗಿಷ್ಟ ಅಂತ ಮಾಡ್ದೆ",  
 ಎದೆ "ಧಕ್ ಧಕ್"
 ಬಾಯಲ್ಲಿ ನೀರೂರಿತು, ತಟ್ಟನೆ ಒಂದನ್ನು ಬಾಯಿಗೆ ಹಾಕಿದೆ,
  ಇನ್ನೆರಡು ತಿಂದೆ, ಎಲ್ಲಾ ಉಪ್ಪುಪ್ಪು, ಹೇಳಿದರೆ ಗೊಣಗಾಡುವಳು ಗೊತ್ತು
  "ಕಾಫಿಯೋ", "ಕಶಾಯವೋ" ತಿಳಿಯಲಿಲ್ಲ ತೆಪ್ಪಗೆ ಕುಡಿದೆ
  ಎಲ್ಲಾ ಗಂಡಂದಿರಂತೆ  ಕೊನೆಗೆ ಹೇಳಿದೆ "ಎಲ್ಲಾ ಚೆನ್ನಾಗಿದೆ."
  ತಾಜ ಆಗಿ, ಸೋಫಾದ ಮೇಲಿದ್ದ ದಿನಪತ್ರಿಕೆ ಹಿಡಿದೆ
  "ಇವತ್ತು ನಮ್ಮ ಪಕ್ಕದ..." ಶ್ರೀಮತಿಯ ವಾಣಿ ಕಿವಿಮುತ್ತಿತು
  "ಚಿನ್ನದಾಯಣ" ಶುರು ಇನ್ನು - ಮಾಡುವುದೇನು? ಯೋಚಿಸಿದೆ?...
  ಕೇಳಿಸಿದರೂ, ಕೇಳಿಸದ ಹಾಗೆ ಪತ್ರಿಕೆ ಮೇಲೆ ಕಣ್ಣಾಡಿಸಿದೆ
  "ಏನೂಂದ್ರೆ" ಘರ್ಜಿಸಿದಳು, ಬಡಪಾಯಿ ನಾ ಹೆದರಿ "ಏನೆ?.." ಎಂದೆ
  "ಪತ್ರಿಕೆ ಆಕಡೆ ಇಡಿ, ಸದಾ  ಪೇಪರ್,ಪೇಪರ್.." ಗೊಣಗಿದಳು
  "ಪಕ್ಕದ ....ಮ್ಮನಿಗೆ ಅವರ್ಯಜ್ಮಾನ್ರು ವಜ್ರದ ಓಲೆ ಮಾಡಿಸಿದ್ದಾರೆ..
  ಏನ್ ಚೆನ್ನಾಗಿದೆ ಅಂತಾ! ನನ್ಗೂ ಅಂಥದೀಗ ಮಾಡ್ಸಿಕೊಡಿ ಅಂದ್ರೆ"
  ಆಯಿತು ಪೀಠಿಕೆ ಆಯಣಕೆ, ಇಟ್ಟಳು "ಬತ್ತಿ", ಹಾಕಿದಳೆನ್ನ ಜೇಬಿಗೆ ಕತ್ರಿ!
  ಕಳೆದ ತಿಂಗಳಿನ್ನೂ ಮಾಡಿಸಿಕೊಟ್ಟಿದ್ದೆ ಚಿನ್ನದ ಬಳೆ-ಓಲೆ
  ಮೆರೆದಿದ್ದಳು, ಕುಣಿದಿದ್ದಳು, ಮುಂದಿನ ವರುಷದವರಗೆ ಸಾಕೆಂದಿದ್ದಳು
  ಮತ್ತಾಗಲೆ ಹೊಸ ಕೋರಿಕೆ, ನಡೆಸುವ ಬಡಪಾಯಿ ನಾನು ಇರುವೆನೆಂದು.
  ಬಂದ ಕೋಪವ ತಡೆಹಿಡಿದು -
  "ಆದಾಗ ನೋಡೋಣ, ಈಗಾಗದು ಹಣವಿಲ್ಲ" ಎಂದೆ - ಅಷ್ಟೆ!
  ಅಯ್ಯಯ್ಯೋ! ಮನೆಕಂಪ!
  ಶುರುಮಾಡಿದಳು ಕೂಗಾಟ, ಹಾರಾಟ, ನಾಟಕಾಟ - ನನಗೆ ಪೇಚಾಟ
  ಶಪಿಸಿದಳು ಎನ್ನ, ಮನೆ ಬಿಡುವೆನೆಂದು ಹೆದರಿಸಿದಳು, ಅತ್ತಳು,
  " ನಾ ಕಕ್ಕಾಬಿಕ್ಕಿಯಾದೆ!  ಹೆಂಗಸರೆ ಹೀಗೇನು?"
  " ಒಡವೆ ಬಿಟ್ಟರೆ ಬಾಳಿಲ್ಲೇನು?"
  ನನ್ನವಳಿಗೆ "ಅದು-ಇದು " ವಿವರಿಸ ಹೊರಟೆ - ಊಹೂ ಒಪ್ಪಲಿಲ್ಲ
  ನಾಲ್ಕೈದು ಘಂಟೆಗಳ ಪರಿಪರಿಯ ನಟನೆ ಅಮ್ಮಾವ್ರಿಂದ - ಓಲೆಗಾಗಿ
  ಎಲ್ಲ ನಾ ಬಲ್ಲೆ, ಅದು ಅವಳಿಗೂ ಗೊತ್ತು, ಆದರೂ ಬಿಡಳು - ಓಲೆಗಾಗಿ
  ಬೇಸತ್ತು, ತಲೆಕೆಟ್ಟು, ತಲೆಯಾಡಿಸಿದೆ ಕೊನೆಗೆ - ಹೊಸರಾಗ ಆಗ
  "ಬೇಕಾಗಿಲ್ಲ! ಇಷ್ಟು ನೋಯಿಸಿ ಕೊಡಿಸಬೇಕಾಗಿಲ್ಲ! ಈಗಿರುವುದೂ ಬೇಡ!"
  ಮತ್ತೊಂದು ಘಂಟೆ ನಡೆಸಿದಳು, ಈ ಪಟ್ಟಿನಲಿ ಆಲಾಪನ
  ನಂತರ ಕ್ಷಣಕಾಲ ಮೌನ, ಆಮೇಲೆ ಭಾರವಾದ ಮಾತು,
  ವಾತಾವರಣದಲ್ಲಿ ಇರಲು ಇನ್ನೂ ಅಲ್ಲಲ್ಲಿ ತೂತು.
  ಸೋತು ನೀರಾದ ನಾನು, ಕಣ್ಮುಚ್ಚಿದೊಡನೆಯೆ ಆವರಿಸಿತು ನಿದ್ದೆ
  ಅತ್ತು ಗೆದ್ದ ಅವಳಿಗೆ ಹೊಸಹೊಸ ಕನಸು, ಬರಬೇಕಿನ್ನೆಲ್ಲಿಯ ನಿದ್ದೆ
  ಪಕ್ಕದ ಮನೆಯ ....ಮ್ಮನವರ ಕೃಪೆಯಿಂದ,  ಅವರ ಬಿಟ್ಟಿ ಪ್ರದರ್ಶನದಿಂದ
  ಬಹುಶಃ, ನಡೆದಿರಬೇಕು ಇನ್ನೂ ಹಲವೆಡೆ ಇಂದು, ಆಯಣ - ಚಿನ್ನದಾಯಣ

             ರಚನೆ - ಸಂತ (ಸ.ಗು.ಸಂತೋಷ್)
             ದಿನಾಂಕ - ೨೩/೦೬/೦೨

ಕವಿತೆ: ಜೀವನ

              ಜೀವನ

ಸ್ನೇಹ ಪ್ರೀತಿಯ ಸಂಭ್ರಮ, ಶಾಂತಿ, ಪ್ರಗತಿಯ ಸಂಗಮ!

ವಿಸ್ಮಯ ಲೋಕವೆ ಈ ತಾಣ, ಎಲ್ಲಕೆ ಸಾಕ್ಷಿಯು ಈ ಯಾನ
ಬಯಸೋದೊಂದೆ ಈ ಪ್ರಾಣ, ನಿತ್ಯ ನಿರಂತರ ಈ ಧ್ಯಾನ

ಸ್ನೇಹ ಪ್ರೀತಿಯ ಸಂಭ್ರಮ, ಶಾಂತಿ, ಪ್ರಗತಿಯ ಸಂಗಮ!

ಹುಟ್ಟಿದೆ, ಸಾವಿದೆ, ನಡುವಲಿ ಗುಟ್ಟಿದೆ
ಗುಟ್ಟಿನ ನಡುವಲಿ ಹುಟ್ಟಿದೆ ಸಾವಿದೆ
ಸೇರುತ, ಕಾಣುತ, ಯಾನದ ಸೋಜಿಗ
ಬಾಳುತ, ಸಾಗುತ ಸೃಷ್ಟಿಯ ಮೆಚ್ಚಿರೆ!

ಸ್ನೇಹ ಪ್ರೀತಿಯ ಸಂಭ್ರಮ, ಶಾಂತಿ, ಪ್ರಗತಿಯ ಸಂಗಮ!

ಹಗಲಿದೆ, ಇರುಳಿದೆ ನಡುವಲಿ ದಿನವಿದೆ
ಅನುದಿನ ನಡುವಲಿ ಹಗಲಿದೆ ಇರುಳಿದೆ
ಏಳುತ ಬೀಳುತ ಜೀವದ ಕಾಳಗ
ಅಲೆಯುತ ಈಸುತ ತಾರಣ ನೆಚ್ಚಿರೆ

ಸ್ನೇಹ ಪ್ರೀತಿಯ ಸಂಭ್ರಮ, ಶಾಂತಿ, ಪ್ರಗತಿಯ ಸಂಗಮ!

ನೆನಪಿದೆ, ಕನಸಿದೆ ನಡುವಲಿ ಇಂದಿದೆ
ಇಂದಿನ ನಡುವಲಿ ನೆನಪಿದೆ, ಕನಸಿದೆ
ಹೇಳುತ, ಹಾಡುತ, ಭಾವದ ಕಬ್ಬಿಗ
ನಲಿಯುತ, ನಲಿಸುತ, ಬದುಕಿನ ಹುಚ್ಚಿದೆ

ರಚನೆ: "ಸಂತ" (ಸ.ಗು ಸಂತೋಷ)
ತಾರೀಖು: ೧೨/೦೮/೧೪


ಕವಿತೆ: ನೃಪತುಂಗ

             ನೃಪತುಂಗ

ಇದೇ ನನ್ನಯ ನೃಪತುಂಗ, ಸುಜ್ಞಾನದ ಸುಧೆ ಗಂಗಾ
ತನ್ಮಯ ಓದನು, ಚಿನ್ಮಯ ಬಾಳನು ಕಲಿಸಿದ, ಹರಸಿದ
ಇದೇ ನನ್ನಯ ನೃಪತುಂಗ

ಭಾಗ್ಯನಗರದ ಮುಕುಟವೆ ಎನಿಸಿ,
ವಿದ್ಯೆ ವಿನಯದ ಜೊನ್ನನು ಹರಿಸಿ
ಸುಂದರ ಬದುಕಿನ ಚೆಲುವನು ನಿರ್ಮಿಸಿ
ಮೆರೆದಿಹ ಓಜರ, ದ್ರೋಣರ-ಜಕಣರ ಸುಕೃತ ಗುರುಕುಲವೆ

ಸ್ನೇಹ ಪ್ರೀತಿಯ ಅಂಕುರ ಮೊಳೆಸಿ
ಭಕ್ತಿ ಭಾವದಿ ಹೃನ್ಮನ ನಲಿಸಿ
ನಾಡು ನುಡಿಗೆನೆ ಕೆಚ್ಚೆದೆ ಕಾಣಿಸಿ
ಒಲಿದಿಹ ಕೆಳೆಯರ, ಸುಜನರ-ಸುಗುಣರ, ಕೃಷ್ಣನ ಗೋಕುಲವೆ

ಶಾಂತಿ ಸಮನ್ವಯ ಸಾರುತ ಸೇರಿಸಿ
ನೆರೆಯಲಿ ಕನ್ನಡ ಡಿಂಡಿಮ ಬಾರಿಸಿ
ಭಾರತ ಕೀರುತಿ ಪತಾಕೆ ಹಾರಿಸಿ
ಬೆಳಗಿಹ ದಿವಿಜರ, ಸಂತರ-ಪಂಥರ ಸರಸತಿ ದೇಗುಲವೆ

ಅನಂತ ಸೃಷ್ಟಿಯ ಅನನ್ಯ ಕಾಣಿಕೆ
ಜೀವನ ಯಾತ್ರೆಗೆ, ಬೆಳಕಿನ ದೀವಿಗೆ
ಭಾವದ ಜಾತ್ರೆಗೆ ವರ್ಣದ ಮಾಳಿಗೆ
ಇಳೆಗಿಹ ಭಕ್ತಿಯ, ಮುಕ್ತಿಯ ಮಾರ್ಗದ, ಮಾನಸ ಮಂದಿರವೆ

ರಚನೆ: “ಸಂತ” (ಸ.ಗು ಸಂತೋಷ)
ತಾರೀಖು: ೨೮/೦೭/೨೦೦೫

ಪ್ರೇರಣೆ: ನನ್ನ ಅಚ್ಚುಮೆಚ್ಚಿನ ನೃಪತುಂಗ ಶಾಲೆ

ಕವಿತೆ: ಸುನೀತ

       ಸುನೀತ
     ~~~~~~

ನನ್ನೊಲ್ಮೆ ಶ್ರೀಕಾರ, ಆಕಾರ, ಸಾಕಾರ
ನಿನ್ನಿಂದ, ನಿನಗಾಗಿ, ನಿನ್ನಲ್ಲಿಯೆ ಸುನೀತ!

ಭಾವ ಲಹರಿಯ ಮೆಚ್ಚಿ, ಒಲವ ದೀವಿಗೆ ಹಚ್ಚಿ
ಕಾವ್ಯ ಚಿಮ್ಮುತ ಬರಲು, ಅದು ನೀನೇನೆ!
ಮನದ ಹಂಬಲ ಮಿರುಗಿ, ಕನಸಿನಂಗಳ ಬೆಳಗಿ
ನಿತ್ಯ ಸಂತಸ ಚಿಲುಮೆ, ಅದು ನೀನೇನೆ!

ಭಾವದೋಕುಳಿ ಹನಿಸಿ, ದಿವ್ಯ 'ಪ್ರಕೃತಿ' ಅರಸಿ
ಬರೆಯೆ ನೆಚ್ಚಿದ ರೂಪ, ಅದು ನಿಂದೇನೆ!
ಏಕಾಂತವನು ದಾಂಟಿ, ನಾಕು ತಂತಿಯ ಮೀಟಿ
ಒಲವೆ ಮೂಡಿದ ಹಾಡು, ಅದು ನಿಂದೇನೆ!

ಸ್ನೇಹ ಪಲ್ಲವ ಇರಲಿ, ಪ್ರೇಮ ಪಲ್ಲವಿ ಇರಲಿ
ಭಾವ ಗಂಗೆಗೆ ಪದವಿ, ಅದು ನೀನೇನೆ!
ನವೀನ ಬಾಳಿನೊಳು, ಮುಂದಿನ‍ಅ‍ಅ‍ಅ ಯಾನದೊಳು
ನನ್ನೊಲವಿನ ಗೆಳತಿ, ಸಂಗಾತಿ ನೀನೇನೆ! ಅದು ನೀನೇನೆ!


ರಚನೆ - 'ಸಂತ' (ಸ.ಗು.ಸಂತೋಷ)
ತಾರೀಖು - ೧೩/೦೭/೧೦

ಪ್ರೇರಣೆ - ನನ್ನ ಶ್ರೀಮತಿ, ಇತ್ತೀಚೆಗಷ್ಟೆ ಮದುವೆಯ ಸಂಭ್ರಮದೆಡೆಗೆ ಪಯಣ ಆರಂಭಿಸಿದ ತನ್ನ ಮೈದುನನ ಭಾವಲಹರಿಯನ್ನು ಕುರಿತು ಪದ್ಯ ಬರೆವಂತೆ ಕೋರಿದುದು.
ಹುಡುಗಿಯ ಹೆಸರು 'ಸುನೀತ', ಕಾವ್ಯ ಪ್ರಾಕಾರಗಳಲ್ಲಿ ಬಹಳ ಪ್ರಚಲಿತವಾದುದು 'ಸುನೀತ' ಇವೆರಡನ್ನು ಅಳವಡಿಸಿಕೊಂಡು, ನನ್ನ ತಮ್ಮನ ಭಾವಗಂಗೆಯನ್ನು ಕಲ್ಪಿಸುತ ಈ ರೂಪವನ್ನು ನೀಡಿದ್ದೇನೆ.

ಕವಿತೆ: ಶ್ರಾವಣದ ಸಂಭ್ರಮ

      "ಶ್ರಾವಣದ ಸಂಭ್ರಮ"
 ~~~~~~~~~~~~~~~

'ಶ್ರಾವಣದ ಸಂಭ್ರಮ', ಬಣ್ಣಿಸುವಳು ಇವಳು ಹೇಗೆ!
ತುಸು ನಾಚಿಕೆ, ತುಸು ಮುನಿಸು ಕಾಡಿರಲು ಇವಳ ಹೀಗೆ!

ಎಷ್ಟೋ ದಿನದ ಕನಸು ನನಸಾಗಿರೆ ಸವಿ ಸೊಗಸು
ತೋರಿದೆ ಕೆಂಪೇರಿದ ಸುಮಬಾಲೆಯ ಮೊಗದಲ್ಲಿ!
ಬಯಸಿದ ನಿತ್ಯ ನೋಟ, ಅವತರಿಸಿರೆ ನವ ಮಾಟ!
ನೋಡಿ ನವೀನ ರೂಪ, ಇವಳ್ಹೊಳೆವ ಕಣ್ಗಳಲಿ!

ಎಂದೂ ಕಾಣದ ಮುನಿಸು, ಸಾಕಾಗಿರೆ ಕಿವಿ ಮಾತು!
ಮೂಡಿದೆ ಚಡಪಡಿಕೆ ಪಲ್ಲವಿಸಿದ ಒಲವಲ್ಲಿ
ಬಿಡುವೆ ಕೊಡದ ಕೆಲಸ, ಸಾಕಗಿದೆ ಪ್ರತಿದಿವಸ
ಕಾಡಿದೆ ರಜೆಯ ತಾಪ, ತನ್ನಲ್ಲನ ಕಲೆವಲ್ಲಿ!

ಶ್ರಾವಣ ತೋರಿದಾಗ, ಸಂಗಮಿಸಲು ಶುಭ ಘಳಿಗೆ
ಆಷಾಢದಿ ಅಭಿಸಾರಿಕೆ, ನಿತ್ಯಂತರ ಸುಳಿಯಲ್ಲಿ!
ರಾಯರ ಮಾತೆ ಮುತ್ತು, ಅವರದೇನೆ ಮೂರು ಹೊತ್ತು!
ಮಿಲನಕೆ ಸಜ್ಜಾದರು, ಗತ್ಯಂತರ ಇರದಲ್ಲಿ!

ರಚನೆ - 'ಸಂತ' (ಸ.ಗು.ಸಂತೋಷ್)
ತಾರೀಖು - ೧೩/೦೭/೧೦

ಪ್ರೇರಣೆ - ನನ್ನ ಶ್ರೀಮತಿ, ಇತ್ತೀಚೆಗಷ್ಟೆ ಮದುವೆಯ ಸಂಭ್ರಮದೆಡೆಗೆ ಪಯಣ ಆರಂಭಿಸಿದ ನನ್ನ ತಮ್ಮನ ಬಾಳ ಸಂಗಾತಿಯ ಭಾವಲಹರಿಯನ್ನು ಕುರಿತು ಪದ್ಯ ಬರೆವಂತೆ ಕೋರಿದುದು.
ಮದುವೆ ನಿಶ್ಚಯವಾದ ಯಾವುದೆ ಕನ್ಯೆಯ ಮನ:ಸ್ಥಿತಿ ಹೀಗಿದ್ದಿರಬಹುದು.

ಕವಿತೆ: ಕವಲು

                ಕವಲು - ಇದೇನೆ ಪ್ರೀತಿ?!

ಪ್ರೀತಿ ಪ್ರೇಮ ಎಂದೆಲ್ಲ ನುಡಿದು, ಬಂಧು ಬಳಗ ಎಲ್ಲರನು ತೊರೆದು
ಕಡಲಾಚೆ ದೂರ ಬಹು ದೂರ ಸಾಗಿ, ಏಕಾಂತದಾನಂದ ಅರಸುತ್ತ ಹೋಗಿ
ಬಾಳೆಂಬ ನೌಕೆ ಬಯಸಿದ್ದಿದೇನು? ಮುಂದೆಲ್ಲ ಪಯಣ ಕವಲಲ್ಲೆಯೇನು?

ಅಂದಾಗ, ಕಂಡಾಗ, ಪ್ರೀತಿ ಮೊಳೆತಾಗ,

ಅರಳಿದ ಹೂ ಮನಸು, ಪರಿಪರಿಯ ಕನಸು! ಈ ಬಾಳೆ ಸೊಗಸು, ಇನಿತಿಲ್ಲ ಮುನಿಸು!
ಎಲ್ಲೆಡೆ ಸಿಹಿ ಒಲವು, ಅನವರತ ಗೆಲವು! ಅವಳೇನೆ ಅರಿವು, ಇನ್ನೆಲ್ಲ ಮರೆವು!

ನೋವಿರಲಿ, ನಲಿವಿರಲಿ ಜೊತೆ ಇರುವ ಭಾಷೆ, ಅವಳೊಲವಿನಾಶ್ರಯವೆ ಬಾಳಿನಲ್ಲಿನ ಆಶೆ!
ಯಾರಿರಲಿ, ಇರದಿರಲಿ ಜೊತೆ ನಡೆವ ಮನಸು, ಬಯಸೆ ಏನನು ಎಂದೂ ಇನಿತು ಬಾರದ ಮುನಿಸು!

ಅನುರಾಗ, ಶುಭಯೋಗ ಹಸನಾದ ಬದುಕು! ಇರಲಿಲ್ಲ ಇನಿತು ಕನಸಿನಲೂ ತೊಡಕು!

ಇಂದೀಗ, ಒಂದಾಗಿ, ಹೊಸ ಬಾಳ್ವೆ ಕಂಡಾಗ,

ವಿರಹ ದಳ್ಳುರಿ ಆರಿ ದಾಹ ಮುಗಿದಿರುವಾಗ, ಹಳತಾದ ಕನಸೆಲ್ಲ ಚಿಗುರಿ ನಿಂತಾಗ,
ದಾಂಪತ್ಯ ಅನಗತ್ಯ, ಏಕಾಂತವೆ ನೇಪಥ್ಯ! ಬೆಸುಗೆಯ ಒಸಗೆ ಸಾಕಾಯಿತೇನೀಗ!

ಕಂಡೆಲ್ಲ ಕನಸು, ಮಂಜಾಗಿ ಕರಗಿ; ಒಲವೆಂಬ ಬಂಧ ಮಿಂಚಾಗಿ ಅಡಗಿ
ನೀನೆಲ್ಲೊ, ಅವಳೆಲ್ಲೊ, ದೂರಾಗಿ ನಿಲ್ಲೆ; ಆಗೊಮ್ಮೆ, ಈಗೊಮ್ಮೆ, ನೆನಪಷ್ಟೆ ಈಗ!

ಯಾವ ಸಾಧನೆಗೆ ಈ ಬೆದಕು, ಕಾಣಲೊಲ್ಲದೆ ಬೆತ್ತಲಾಗಿಹ ಬದುಕು!

ರಚನೆ - ಸಂತ (ಸ.ಗು.ಸಂತೋಷ)
ತಾರೀಖು - ೦೫/೦೩/೧೦

ಕವಿತೆ: ಹೊಂಬಾಳೆ

              ಹೊಂಬಾಳೆ!!

ಹೊಂಬಿಸಿಲಿನಲ್ಲಿ, ತಂಪೆಲರಿನಲ್ಲಿ ಹರಿಯುತಿದೆ ಪ್ರೀತಿ ಒರತೆ
ಹೊನ್ನುಡಿಯ ನುಡಿವೆ, ಕನ್ನಡಿಯ ಹಿಡಿವೆ ನೋಡಿಲ್ಲಿ ದಿವ್ಯ ಚರಿತೆ!

ಹೊನ್ನೆನಪಿನ ರಂಗು ಹೊಮ್ಮಿ ಚಿಮ್ಮುತ ನೆಚ್ಚುತಲಿ
ಚೆಲುವ ಚಿತ್ತಾರಕೆ ಹಿಗ್ಗಿ ಮನ ಪ್ರತಿನಿತ್ಯ ಚಿತ್ರಿಸಿದೆ
ನಭವಿಳಿದು ಮಡಿಲೇರಿ, ಬೆಳಗಿ, ರಂಗೇರಿ, ನಲಿಸಿ
ಕಲ್ಪನೆಯ ಸಿರಿ ಸಂಚರಿಸಿ ಬರೆಸಲಿ, ಬೆರೆಸಲಿ, ಮೆರೆಸಲಿ!

ಹೊಂಬೆಳಕಿನ ಕಿರಣ ಹಣಿಕಿ ಇಣುಕುತ ನೋಡುತಲಿ
ಇನ ಮೊಗವ ನೋಡೆ ಮನ ಅನುದಿನವು ತಪಿಸುತಿದೆ
ನಿಜವೆನಿಸಿ ಉಷೆ ಬರಲಿ, ಹೊಳೆದು, ತೇಲಾಡಿ, ಬಳಸಿ
ನಂದನದ ಸಿರಿ ಸಿಂಗರಿಸಿ ರಮಿಸಲಿ, ನಡೆಸಲಿ, ಫಲಿಸಲಿ!

ಹೊಂಗನಸಿನ ಮೊಗ್ಗು ಮೆಲ್ಲ ಮೆಲ್ಲನೆ ತೋರುತಲಿ
ಹೂವಾಗಲೆನುತ ಮೃದುಲ ಮನ ಹಗಲಿರುಳು ಜಪಿಸುತಿದೆ
ನನಸೆನಿಸಿ ಸುಮವಾಗಿ, ಅರಳಿ ನಳನಳಿಸಿ ಘಮಿಸಿ
ಚಂದನದ ಸಿರಿ ಆವರಿಸಿ ಜಯಿಸಲಿ, ಕುಣಿಸಲಿ, ತಣಿಸಲಿ!

ರಚನೆ - "ಸಂತ" (ಸ.ಗು.ಸಂತೋಷ್)
ತಾರೀಖು - ೦೨/೦೯/೧೫

Thursday, June 21, 2018

ಕವಿತೆ: ತ್ರಿಮೂರ್ತಿ

            ತ್ರಿಮೂರ್ತಿ

ಸುರೆಯ ಗಂಗೆಯಲ್ಲಿ ಈಸಿ ಮೂರು ಗೆಳೆಯರು
ಸ್ನೇಹಲೋಕದಲ್ಲಿ ತೇಲಿ ತೂಗುತಿರುವರು

ಮರೆತು ಎಲ್ಲ ನೋವು, ಕರ್ಮಕಾಂಡ, ಸಾವು
ನಿಶೆಗೆ ನಶೆಯ ಕಾವು ತುಂಬಿ ಬೀಗುತಿರುವರು!

ನೆನಪಿನಲ್ಲಿ ಜಾರಿ ನೋಡಿದರೆ
ಅನುಪಮ..ಅನುಪಮ..ಅನುಪಮ
ವಿಜಯರೇಖೆ ಮೂಡಿ ಬೆಳಗುತಿರೆ
ಸಂಭ್ರಮ..ಸಂಭ್ರಮ..ಸಂಭ್ರಮ

ಹೃದಯವಂತರು, ಇವರೆ ಸುಗುಣಶೀಲರು
ಸ್ಥಂಭೀಭೂತರು, ಈಗ ಸುರೆಯ ದಾಸರು
ನೆಚ್ಚಿ ಮೆಚ್ಚಿ ಮಧುವ ಹೀರಿ ಬಲು ಪುನೀತರು
ಮನಸು ಬಿಚ್ಚಿ ಮಾತು ಸೇರಿ ಪರಮ ಪ್ರೀತರು

ಕನಸು ಹಚ್ಚಿ ಜಿಗಿದು ಸಾಗುತಿರೆ
ಸುಂದರ..ಸುಂದರ..ಸುಂದರ
ಜಗವು ಮೆಚ್ಚಿ ಕುಣಿದು ಮೆರೆಯಲು
ನಿರಂತರ..ನಿರಂತರ..ನಿರಂತರ

"ಜೋ"ಕುಮಾರರು ಇವರೆ ಉದಿತ ಜಾಣರು!
ಸುರಭಿ ಪುತ್ರರು, ಈಗ ಪಾನಮತ್ತರು
ಬಳಸಿ ಬಯಸಿ ಎಲ್ಲೆ ದಾಟಿ ನಿರ್ದಿಗಂತರು
ಮದಿರೆ ಪರಿಧಿಯಲ್ಲಿ ಮಿಂದು ಸಂತೃಪ್ತರು!


ರಚನೆ: "ಸಂತ" (ಸ.ಗು.ಸಂತೋಷ)
ತಾರೀಖು: ೦೨/೦೪/೨೦೧೭

ಪ್ರೇರಣೆ: ನನ್ನ ಸಹೋದ್ಯೋಗಿ ಒಬ್ಬ ಇಬ್ಬರು ವಿದೇಶಿ ಯಾತ್ರಾರ್ಥಿಗಳೊಂದಿಗೆ ಪಾನ ಸೇವನೆ ನಡೆಸಿ ಕಳುಹಿದ ಭಾವಚಿತ್ರ.


Friday, June 15, 2018

ಕವಿತೆ: ಪಶ್ಚಿಮ ಘಟ್ಟ

                   ಪಶ್ಚಿಮ ಘಟ್ಟ

ಕನ್ನಡ ನಾಡಿನ ಐಸಿರಿ ಸೊಬಗಿಗೆ ಪಶ್ಚಿಮ ಘಟ್ಟವೆ ಮಣಿಮುಕುಟ
ಹೃನ್ಮನ ಕಣ್ಗಳಿಗಿಲ್ಲಿಯೆ ನೋಡು ಸಗ್ಗದ ಸಿರಿಸವಿ ಬಲು ನಿಕಟ!

ಹರಿದೆಡೆ ನಯನ ವಿಕಸಿತ ವದನ
ಮೂಡಣ, ಪಡುವಣ, ತೆಂಕಣ, ಬಡಗಣ
ಎಲ್ಲೆಡೆ ಕಾನನ, ದಟ್ಟಣೆ ಕಾನನ
ಚಂದನ-ನಂದನ, ವನಸುಮ ಕಾನನ!
ತೆರೆದಿರೆ ಕರಣ ನಲಿಯುವ ಹರಣ
ಸುಯ್ಯೆಲರ್ ಮೇಳದಿ ಬಳಕುವ ದೂಮರ!
ಶೃತಿಲಯ ತಾಳದಿ ಮೀಯಿಪ ಶೀಕರ!
ದಿಬ್ಬಣದಿಂಚರ! ಸಂಭ್ರಮದಂಕುರ!
ಬೆಳೆದೆಡೆ ಚರಣ ಹಸಿರಿನ ಸದನ!
ಗಿರಿಮಲೆನಾಡೊಲು ಎಲ್ಲೆಡೆ ಸಿಂಗರ
ಹಸಿರಲೆ ಹಂದರ! ಹಸಿರಲೆ ಕಂದರ!
ಕಬ್ಬಿಗನೋಗರ! ತಪಸಿಯ ಆಗರ!
ಒಲವಿಗೆ ತರಣ ಚೆಲುವಿನ ಅರಣ!
ತೊರೆ-ಝರಿ ಸಂತತಿ! ಜೋಗದ ಕೀರುತಿ
ತುಂಗೆ-ಶರಾವತಿ, ಭದ್ರೆ-ನೇತ್ರಾವತಿ
ತಣ್ಣೆಲ-ಹೊನ್ನೆಲ ಗೆಲುವಿನ ಸಾರಥಿ!
ಜೊನ್ಮೆಳೆ ಅರುಣ! ಜೇನ್ಮಳೆ ವರುಣ!
ಖಗಮಿಗಸಂಕುಲ ಖೇಡನ, ನರ್ತನ
ಬಾಂದಳ-ಭೂರಮೆ ಸರಸದ ಚಿತ್ರಣ
ಪ್ರಕೃತಿ ಸೊಗಸಿದೆ, ಸಗ್ಗದ ಅಂಕಣ!
                              ರಚನೆ - "ಸಂತ" (ಸ.ಗು ಸಂತೋಷ್)
                              ತಾರೀಖು - ೩೦/೦೯/೦೬

ಕವಿತೆ: ಬಿಸಿಲು ರಾತ್ರಿ

                 ಬಿಸಿಲು ರಾತ್ರಿ

ನೀಲಾಕಾಶದ ಕಪ್ಪು ಛಾಯೆಯಲಿ ಕೆಂಪು ನೇಸರನು
ಬಿಸಿಲ ಬೇಗೆಯ ನೀಡಿ ತಂಪಾಗ ಹೊರಟಿಹನು
ಅನುಜ ಚಂದಿರನೆಲ್ಲೋ ಮೇಘ ಹಿಂಬದಿಯಲ್ಲಿ
ಹಣಿಕಿಣುಕಿ ತುಂಟಾಟ ನಡೆಸಿಹನು!

ನಿಬಿಡತೆಯ ಕಾಣದೆ ತರುವೆಲ್ಲ ಚೆಲ್ಲಾಪಿಲ್ಲಿ,
ಎಲರಲ್ಲಿಲ್ಲಿ, ಒಮ್ಮೊಮ್ಮೆ, ತರಲು ಬಿಸಿತಂಪು!
ಘ್ರೀಷ್ಮಾಗ್ನಿ ನಂದಿ ಶಿಶಿರ ಬಂದಂತೆ
ಮಸಣ ಮೌನಕೆ ಸಾಕ್ಷಿ ಗುಡ್ಡಗಾಡುಗಳಿಲ್ಲಿ,
ನೆಲಕಚ್ಚುತಿರೆ ಎಲೆಹೂವು ಮುದಿತನದಲ್ಲಿ!
ಮನೆ ಸೇರುವ ಹಕ್ಕಿಗಳ ಮರೆತ ಚಿಲಿಪಿಲಿಯಲ್ಲಿ!
ಎತ್ತೆತ್ತಲೆಲ್ಲಾ ಕಡುಕಪ್ಪು ಮುಸುಕದ ಹರಡಿ
ಸೌಮ್ಯತೆಯ ಹಿಂದೆಲ್ಲೊ ಅನ್ಯ ಮರ್ಮವ ಕದಡಿ
ಅರಹುತಿದೆ ನೂರೆಂಟು, ಪರಿಸರದ ನೀರವತೆ!

ಆ!!!!!!
ಮುಂಗಾರು ಮೋಡದ ಮೇಡಿನಲಿ, ಮಡುವಿನಲಿ!
ಕೋಲ್ಮಿಂಚ ಬೆಳಕದೇನೊ?!, ಇರುವುದಲ್ಲೇನೊ?!
ಕಥಾಸಾಗರದ ಭೂತಕೂಟದ ನೆಲೆಯೊ...?!
ಇಲ್ಲವೇ.....................?
                                              ರಚನೆ:   ಎಸ್.ಜಿ.ಸಂತೋಷ್
                                              ದಿನಾಮ್ಕ: ೧೬/೦೧/೦೩

ಪ್ರೇರಣೆ: ನನ್ನ ಗೆಳೆಯ ಪೃಥ್ವಿ ಬರೆದು ಕಳುಹಿಸಿದ ವರ್ಣಚಿತ್ರ... ಅದು ಬಲು ವಿಚಿತ್ರವಾದ ಚಿತ್ರಣ

ಕವಿತೆ: ಆಸರೆಯ ಆಸೆರೆ

            ಆಸರೆಯ ’ಆಸೆರೆ’

ಏಕೊ ಕಾಣೆ ’ಭಾವ ಗೆಳೆಯ", ಬದುಕು ಮುನಿದಿದೆ
ನಿತ್ಯ ಸತ್ಯ, ಸ್ನೇಹವೆರೆದೆ, ಮನಸು ದಣಿದಿದೆ!

ಎಲ್ಲ ಕಾಮ, ಮೋಹ ಸುಳಿಯ ||೨||
ಸುತ್ತ ನಡೆದು ಸವೆಸಿ, ದಹಿಸಿ,
ಎನ್ನ ಭಾವ ಜ್ಯೋತಿ ಜೀವ ಕದಡಿ ಕರಗಿದೆ!
ದುಡಿವ ಗುಡಿಯ ಓಂಕಾರದಿ, ಅಹಂಕಾರ ತುಂಬಿದೆ!
ತರತಮಗಳ, ತಹತಹಗಳ ತಾಂಡವವೆ ನಡೆದಿದೆ!

ತಾಯಿ-ತಂಗಿ, ಮಡದಿ-ದೇವಿ ||೨||
ಭಾವ ಬಲಿಯು ನಡೆದು ಸಾಗಿ
ಚಿತ್ತ ಹಾರಿ, ವಿಷವ ಕಾರಿ, ಪುರುಷ ಕಲ್ಲಿದೆ!
ಕರ್ಮ ಬನದ ಮರಮರದಲಿ, ನಶೆನುಸಿಯು ಬೆಳೆದಿದೆ
ಬೆಳೆಬೆಳೆದಿಹ ಮರ ಬಳ್ಳಿಯ ’ಆಸೆರೆ’ಗೆ ಕರೆದಿವೆ!

ಒಲವು-ನಲವು , ನೇಹ ಘನವು ||೨||
ಧರ್ಮ ಮರೆತು, ಶರ್ಮ ಕೊಳೆತು
ತಂತಿ ಮುರಿದ ಎದೆಯ ವೀಣೆ, ದೇಹ ಒಂದಿದೆ!
                               ರಚನೆ - ’ಸಂತ’ (ಸ.ಗು.ಸಂತೋಷ್)
                               ತಾರೀಖು - ೨೯/೦೧/೦೬

ಕವಿತೆ: ಮಹಾಯುದ್ಧಂ

ಜುದ್ಧಖೇಳವಿದು ಮೊದಲಾದುದೇಕೆಂದು ಸು
ಯ್ದೋರಿದ ಕದಡಿದ ಚಿತ್ತಕಾರೇನ್ ಪೇಳ್ಪರ್
ಕಾರಣಗಳಗಣಿತಾಯೋಧನದೊಳ್ ಗೆಯ್ವರ್ ಹನನವಂ ನಾಳ್ಗೋಸುಗಂ
ಪೊಂಕದ ಪೈಜೆಯಿಂ ಸಿರಿಪೊಂದಾವರದರಿಂಂ
ಒಲ್ಮೆಯಿಂ ಬಲ್ಮೆಯಿಂ ಕಿಚ್ಚಿನಿಂ ಕೆಚ್ಚಿನಿಂ
ಛದ್ಮದಿಂ ಧರ್ಮದಾಣತಿಯಿಂ  ಪೈಶಾಚದಿಂ ದ್ವೇಷದಿಂ ಸನ್ಮೈತ್ರಿಯಿಂ

ರಣಕಳಕೆ ಎಂಟೆದೆಯೊಳನಿಬರುಂ ಕುಂಜುತಲಿ
ಶಲ್ಯಚಾಪಸಿಗದೆ ಮಿಗಿಲ್ಗೊಂಡ್ ಬಲ್ಮೆಯೊಳ್
ಬೆಸೆದು ಪೂಣ್ದುದಲ್ಬತ್ ಪುಟಿಯೆ ಶೈಲದಂತಾನಿಸಿ ತಡೆದೊಡೆದು ಪಗೆಗಳುಂ
ಒಲ್ಮೆ ಕಂಗಳಾಗಿ ಕು-ಸಿರಿ ಕ್ಞಪ್ತ ಪಿರಿದಿರೆ
ಛದ್ಮಕೋಡಿಯ ನೇಯ್ದು ಕೊರಲ್ ಕೀತು ರಣಲಂ
ಪಟಿ ಬೊಂಡಿಗಳ್ ಮಣ್ಮುಳಿಯೊಸರಿ ಕೆನ್ನೀರಿನಿಂ ಕೆಂಗೆರೆಯು ಪುಟ್ಟಿತುಂ

ಅರ್ಕನಸ್ತಮಾದೊಡೆ ರಣಾವಾರ ಮಸಣಂ
ವಿಸರ್ಗ ನಿಸರ್ಗದೊಳ್ ಅಳವಳುಲಿಪ ಮೌನೆಲರ್
ಉರ್ಬಿನಿಂ ತೀಡುತಿರೆ ವಿಕೃತಿಗೆ ಸುಕೃತಿಯು ರಣಮೂಳರ ಕೀತ್ಕೃತಿಯುಂ
ಕಾಣ್ಬುದಿಡೆಯೊಳ್ ಜರುಹಿ ಸಿಗಿದಿರ್ಪ ಕ್ರೌರ್ಯದಿಂ
ಚೆಚ್ಚೆದುರಿರ್ಪ ಕರೂರುಗಳ್ ಪಸುಪಣ್ಣಾದ
ಯುಯುತ್ಸಿಗಳ್ ಕಲಿಗಳ್ ಖಂಬೀರರ್ ರಾವುತರ್ ಯೂಥಪರ್ ಮಿಗಿಲವರುಂ


ರಚನೆ : "ಸಂತ" (ಸ.ಗು.ಸಂತೋಷ)
ತಾರೀಖು : ೨೪/೦೪/೦೩

೧) ಓರು - ಚಿಂತಿಸು;ಅಲೋಚಿಸು, ಹನನ - ವಧೆ ಮಾಡುವಿಕೆ, ಪೊಂಕ - ಗರ್ವ, ಬಿಂಕ
   ಪೈಜೆ - ಪ್ರತಿಜ್ಞೆ; ಶಪಥ, ಪೊಂ - ಹೊನ್ನು, ದಾವರ - ನೀರಡಿಕೆ, ಆಸೆ
೨) ಕುಂಜು - ನೆಗೆ; ಜಿಗಿ, ಬೆಸೆ - ಬೆಸುಗೆ ಹಾಕು; ಗರ್ವಿಸು; ಸೊಕ್ಕು, ಕು - ಭೂಮಿ, ಕ್ಞಪ್ತ - ಮೌಲ್ಯ;
   ಕಲ್ಪಿಸಿದ;  ಏರ್ಪಡಿಸಿದ, ಛದ್ಮ - ವೇಷಾಂತರ; ಮೋಸ; ನೆಪ, ಖೋಡಿ - ದುರುಳುತನ; ಕೆಡುಕ;
   ನ್ಯೂನತೆ; ಅಪರಾಧ; ಹಾನಿ; ಸಂಶಯ, ಕೀತು - ತುಂಡು; ಸೀಳು; ಚೂರು, ಲಂಪಟ(ಣ) -    ಅತ್ಯಾಸಕ್ತಿಯುಳ್ಳವನು; ಲಾಲಸ; ಕಾಮುಕ,    ಬೊಂಡಿ - ಶರೀರ; ಹಗ್ಗ(ಕಟ್ಟ),  ಮಣ್ಮುಳಿ -       ದೇಹ ವಿಕಾರದಿಂದಾಗುವ ಸಾವು, ಒಸರ್(ರು) -  ಜಿನುಗು;  ಸೋರು; ಒರತೆ
೩) ಆವಾರ - ಆವರಣ; ಅಂಗಳ, ವಿಸರ್ಗ - ಬಿಡುವಿಕೆ; ನಾಶ, ಅಳವಳ - ದುಖ; ವ್ಯಥೆ,
   ಮೂಳ - ಅಂಗಹೀನ,  ಕೀತ್ಕೃತಿ - ಕಿರುಚಾಟ, ಜರುಹು - ಬೀಳಿಸು; ಉರುಳಿಸು; ಕೆಡಹು, ಊರು - ತೊಡೆ,
   ಪಸು - ವಿಭಾಗಿಸು; ತುಂಡುಮಾಡು; ಹಂಚು, ಯುಯುತ್ಸು - ಯುದ್ಧ ಮಾಡುವುದರಲ್ಲಿ ಆಸಕ್ತಿ;
   ಕದನೋತ್ಸಾಹ, ಖಂಬೀರ - ಸಾಹಸಿ, ಯೂಥಪ - ಗುಂಪಿನ ನಾಯಕ, ಉರ್ಬಿ - ಉರ್ವರೆ; ನೆಲ; ಭೂಮಿ,
   ತೀಡು - ಬೀಸು; ಸ್ಪರ್ಷಿಸು; ಉಜ್ಜು; ಹೊಡೆ; ನೇವರಿಸು, ಇಡೆ - ಎದೆ;  ಸ್ಥಳ; ಸ್ವರ್ಗ; ಇರೆ

ಕವಿತೆ: ಎಲ್ಲಿಹಳು ನನ್ನವಳು

             ಎಲ್ಲಿಹಳು ನನ್ನವಳು

ಎಲ್ಲಿಹಳು ಎಲ್ಲಿಹಳು ನನ್ನವಳು ಎಲ್ಲಿಹಳು!
ಹೊಸ ಬಾಳ ಪಯಣದಲಿ ನನ್ನ ಕೈ ಹಿಡಿವವಳು!

ಪ್ರಣವ ಭಕ್ತಿಗೆ ಒಲಿದ ದಿವಿಜ ದರ್ಶನವೆನ್ನೆ
ಕಲ್ಪಜರ ಚೆಲುವಿನಲಿ ಇಳೆಗಿಳಿದ ಸುರಚೆನ್ನೆ
ಬಳಿಬಂದು ಸುಳಿದಾಡಿ ಸೆರೆಹಿಡಿದ ಮನದನ್ನೆ
ಇಂದಿಲ್ಲೊ, ಅಲ್ಲೊ, ಎಲ್ಲೊ, ಭಾಗ್ಯನಗರದ ಕನ್ನೆ?!

ಚಿನ್ಮಯಿಯ ಋತು ತರಿಸಿ, ಸಖಿಗೀತವ ನುಡಿಸಿ
ಕುಸುಮ ಕಂಪನು ಮೆರೆಸಿ, ಸ್ವಪ್ನಲೋಕವ ತೆರೆಸಿ
ಜೀವರೂಪವ ಬೆಳೆಸಿ, ಭಾರ್ಗವಿಯೆ ತಾ ಎನಿಸಿ
ಇಂದಿಲ್ಲೊ, ಅಲ್ಲೊ, ಎಲ್ಲೊ, ಭಾಗ್ಯನಗರದ ಅರಸಿ?!

ಹೃದಯ ಸಂತನ ಬೆಳಗಿ, ನೆಲೆಸಿ ನಡೆಸಿಹ ಮೂರ್ತಿ
ಧವಳ ಪ್ರೀತಿಯ ನಮ್ಮ, ಪ್ರೇಮ ಚಂದ್ರಮ ಪೂರ್ತಿ
ಪ್ರಣಯ ಕಾವ್ಯಕೆ ಹರಿವು, ನಿತ್ಯ ಅವಳದೆ ಸ್ಪೂರ್ತಿ
ಇಂದಿಲ್ಲೊ, ಅಲ್ಲೊ, ಎಲ್ಲೊ, ಭಾಗ್ಯನಗರದ ಕೀರ್ತಿ?!

                                              ರಚನೆ: ’ಸಂತ’
                                              ತಾರೀಖು: ೩೦/೦೬/೦೫

ಕವಿತೆ: ಹಿಮಪಾತ

                      ಹಿಮಪಾತ

ಮನ ಮಂದಿರ, ಹೊಳೆ ತನು ಸುಂದರ, ಸಿರಿ ಜಗ ರಂಗಕೆ
ಬಾ ಹಿಮ ಮಣಿ ಮಳೆ ದರ್ಶನಕೆ
ಈ ಧರೆಗಿಳಿದಿಹ ನರ್ತನಕೆ!

ನೆಲ-ಜಲ-ಮಾಳಿಗೆ, ಅರ್ಜುನ ಚೆಲುವಲಿ
ಬೆಳ್ ಎಲರ್ ಸೊಗದಿಂ ಸುಳಿಸುಳಿಯೆ
ಕಾನನ ಭೂರುಹ ಮಿಂದಿವೆ ಬಿಳುಪಲಿ
ಬೆಳ್ ಮಳೆ ಮುಗಿಲಿಂದಿಳಿಯಿಳಿಯೆ
ವರ್ಣೇಂದ್ರಿಯಗಳ ಸಮ್ಮಿಲನ, ಪಂಚೇಂದ್ರಿಯದೊಳು ಕವಿ ಸದನ
ಕಲ್ಮಷ ಮಾರ್ಜನ, ಶಾಂತಿಯ ಲಾಂಛನ, ಹಂಬಿದೆ ಧವಳದ ಸಿರಿ ಸಾಲೆ!

ರಮ್ಯ ವಿಹಂಗಮ, ಸೃಷ್ಟಿಯು ಅನುಪಮ
ಸಗ್ಗದ ಹಿರಿಸಿರಿ ಧರೆಗಿಳಿಯೆ
ಕಣ್ಹೃದ್ಯಂಗಮ, ವೃಷ್ಟಿಯ ರಂಜನ
ಹಬ್ಬದ ಚೆಲ್ ಘನ ತಿರೆತಿಳಿಯೆ
ಬಾನ್-ಇಳೆ ಮಿಲನಕೆ ಓಕುಳಿಯೆ, ರತಿರಮ ಮಿಥುನಕೆ ದೀವಿಗೆಯೆ
ತನುಮನ ಮಜ್ಜನ, ಭಾವನ ನಂದನ, ಧುಮುಕಿದೆ ಮೈತ್ರಿಯ ಜೇನ್ ಧಾರೆ!

ಪ್ರೇಮದ ರಿಂಗಣ, ಮನಮನ ಅಂಗಣ
ಪ್ರಣಯದ ಮಧುತೊರೆ ಹರಿಹರಿಯೆ
ಬಂಧನ, ಚುಂಬನ, ಒಲವಿನ ಅರ್ಚನ
ಜವ್ವನ ಚಂದನ ಹೊಳೆಹೊಳೆಯೆ
ಅನುಚಣ ಸವಿಯಿರುಳ್ ಹುಣ್ಣಿಮೆಯೆ, ಚಂದ್ರಚಕೋರಿಗೆ ಶ್ರೀನಿಧಿಯೆ
ಸರಸದ ಸೃಜನದೆ ಕವಿಮನ ವಿಕಸನ, ಬೆಳಗಿದೆ ಮಿಥುನದ ಧ್ರುವತಾರೆ
                                                                

ರಚನೆ - ’ಸಂತ’ (ಸ.ಗು.ಸಂತೋಷ್)
ತಾರೀಖು - ೨೨/೧೧/೦೫

Thursday, June 14, 2018

ಕವಿತೆ: ಎಲ್ಲಿ ಹೋದಳೊ!

                    ಎಲ್ಲಿ ಹೋದಳೊ!!

ನೆನ್ನೆವರಗೆ ಬರೆಯುತಲಿದ್ದು, ನನ್ನ ಮನವ ತಣಿಸುತಲಿದ್ದು,
ಚೆಲುವಿನರಸಿ ಕನಸ ಹೆಣೆದು, ಎಲ್ಲಿ ಹೋದಳೊ ಗೆಳೆಯ ಎಲ್ಲಿ ಹೋದಳೊ!

ನನ್ನ-ತನ್ನ ನೆನಪನು ತಂದು, ಚಿಮ್ಮಿಹೊಮ್ಮಿ ಭಾವದ ಬಿಂದು,
ಅರಳೆ ಒಲವ ಅರಳಿಸಿ ತುಂಬಿ, ಎಲ್ಲಿ ಹೋದಳೊ ಗೆಳೆಯ ಎಲ್ಲಿ ಹೋದಳೊ!

ಎಂಟರಲಿ ನಂಟನು ಬೆಸೆದು, ನವದಲಿ ನವರಸವೆಸೆದು,
ಹತ್ತು ಹತ್ತಿ ಹತ್ತಿರ ಸರಿದು, ಎಲ್ಲಿ ಹೋದಳೊ ಗೆಳೆಯ ಎಲ್ಲಿ ಹೋದಳೊ!

ಮುತ್ತು ಮಾತ ಮತ್ತಲಿ ಮುತ್ತಿ, ಸುತ್ತ ಸುತ್ತಿ ಮನಸ ಸುತ್ತಿ
ಬೆಡಗಿ ಬಯಕೆ ಚಿತ್ತದಿ ಬಿತ್ತಿ, ಎಲ್ಲಿ ಹೋದಳೊ ಗೆಳೆಯ ಎಲ್ಲಿ ಹೋದಳೊ!

ಆಟಪಾಟಕೂಟವ ನಡೆಸಿ, ಹೂ-ದುಂಬಿ ಪಾಟವ ಕಲಿಸಿ,
ನೇಹ ಮಧು ನೀಡಿದ ಸರಸಿ, ಎಲ್ಲಿ ಹೋದಳೊ ಗೆಳೆಯ ಎಲ್ಲಿ ಹೋದಳೊ!

ಶ್ರಾವಣದಾಗೆ ಮತ್ತೆ ಕಲೆತು, ನಾಲ್ಕೂ ಕಾಲ ಮಾತಲೆ ಬೆರೆತು,
ಮತ್ತೆ ಮೌನ ತಂದು ಈಕೆ, ಎಲ್ಲಿ ಹೋದಳೊ ಗೆಳೆಯ ಎಲ್ಲಿ ಹೋದಳೊ!

ನಾಕು-ಎಂಟು ನಾನು ಬರೆದೆ, ಎಂಟು-ಹತ್ತ ಹೊನ್ನೆನಪ ಎರೆದೆ,
ಅತ್ತ ಚಿತ್ತ ಬಾರದೆ ಇತ್ತ, ಎಲ್ಲಿ ಹೋದಳೊ ಗೆಳೆಯ ಎಲ್ಲಿ ಹೋದಳೊ!

ನೆನ್ನೆವರಗೆ ಬರೆಯುತಲಿದ್ದು, ನನ್ನ ಮನವ ತಣಿಸುತಲಿದ್ದು,
ಚೆಲುವಿನರಸಿ ಕನಸ ಹೆಣೆದು, ಎಲ್ಲಿ ಹೋದಳೊ ಗೆಳೆಯ ಎಲ್ಲಿ ಹೋದಳೊ!


ರಚನೆ - ಸ.ಗು.ಸಂತೋಷ್
ತಾರೀಖು - ೧೪/೦೨/೦೫

ಕವಿತೆ: ಎಲ್ಲೇ ಇರಲಿ ನಾ ಹೇಗೆ ಇರಲಿ

             "ಎಲ್ಲೇ ಇರಲಿ ನಾ ಹೇಗೆ ಇರಲಿ"

ಎಲ್ಲೇ ಇರಲಿ, ನಾ ಹೇಗೆ ಇರಲಿ
ಗುರುವೇ, ಸಿರಿಗನ್ನಡ ಎನ್ನ ಕರಣ ತುಂಬಿರಲಿ!

ಮನೆಯ ಒಳಗಿರಲಿ, ಹೊರಗೆ ಮನೆಯಿರಲಿ
ತಿಳಿದವರು ಜೊತೆಯಿರಲಿ, ಎನ್ನಲಿ ತಿಳಿವಿರಲಿಿ
ಸಂಸ್ಕೃತಿ ಅರಳಿರಲಿ, ನೆರಳು ಸಂಸ್ಕೃತಿಯಿರಲಿ

ಎಲ್ಲೇ ಇರಲಿ, ನಾ ಹೇಗೆ ಇರಲಿ
ಗುರುವೇ, ಹೊಂಗನ್ನಡ ಎನ್ನ ನುಡಿಮುತ್ತಾಗಿರಲಿ!

ದುಡಿಮೆಯೆ ನುಡಿಗಿರಲಿ, ಹೊನ್ನುಡಿ ದುಡ್ಡಿರಲಿ
ನನ್ನವರು ಬಳಿಯಿರಲಿ, ದೂರ ನನ್ನವರಿರಲಿ
ಬಾಳೆಲ್ಲ ನಗುವಿರಲಿ, ಅಳುವೇ ಬಾಳಿರಲಿ

ಎಲ್ಲೇ ಇರಲಿ, ನಾ ಹೇಗೆ ಇರಲಿ
ಗುರುವೇ, ಸವಿಗನ್ನಡ ಬಾಳುಸಿರ ಉಸಿರಾಗಿರಲಿ!

ಚೆಲುವು ಬಾಳಲಿ ಬರಲಿ, ಕರುನಾಡು ಚೆಲುವಿರಲಿ
ಕೆಚ್ಚು-ನೆಚ್ಚು ಹಚ್ಚಿರಲಿ, ಕನ್ನಡಿಗ ಈ ಕೆಚ್ಚಿರಲಿ
ಕನ್ನಡದೆ ಜಗ ತುಂಬಿರಲಿ, ತುಂಬು ಕನ್ನಡವಿರಲಿ

ಎಲ್ಲೇ ಇರಲಿ, ನಾ ಹೇಗೆ ಇರಲಿ
ಗುರುವೇ, ಚಂಗನ್ನಡದಿ ನಮ್ಮ ತನುಮನ ಮಿಂದಿರಲಿ!

ಹಸಿರೆಂದು ಕಾಡಿರಲಿ, ನುಡಿಯೆಮ್ಮ ಹಸಿರಿರಲಿ
ನರುಹೂಗಳೆಲರಿರಲಿ, ಕಸ್ತೂರಿ ಕಂಪಿರಲಿ
ದನಿ ಕೋಗಿಲೆ ಇಂಪಿರಲಿ, ತಾಯಿ ದನಿಯಿರಲಿ

ಎಲ್ಲೇ ಇರಲಿ, ನಾ ಹೇಗೆ ಇರಲಿ
ಜೊಂಗನ್ನಡ ಇಳೆಗೆ ಸಗ್ಗವನೆ ತರಲಿ!

ರಚನೆ - ಸ.ಗು.ಸಂತೋಷ್
ತಾರೀಖು - ೦೧/೦೫/೦೫

ಕವಿತೆ: ಭೋಜನ ಪರ್ವ

             ’ಭೋಜನ ಪರ್ವ’

ಇಂದು ’ಭೋಜನ ಪರ್ವ’, ಅಕ್ಷಯನ ಮನೆಯಲ್ಲಿ!
ತ್ರಿಮೂರ್ತೀ ಸೇರಿದೆವು, ದಡಬಡಿಸಿ ಭರದಲ್ಲಿ

ಮಾಡುವುದು ಏನಿಂದು? ಗೊಂದಲವು ಮನದಲ್ಲಿ
ನಿರ್ಧರಿಸಿ ಬಿಟ್ಟೆವು ಕೊನೆಗೆ, ಪುಲಾವಿನ ನೆನಪಲ್ಲಿ!

ಏನು ಆತುರ ನಮಗೆ, ಆವ ತವಕವೊ ನಮಗೆ
ಘಂಟೆ ಮಾತ್ರದೆ ಎಲ್ಲ, ಮುಗಿಯಬೇಕೆಂದೆಮಗೆ

ಬಜ್ಜಿ-ಬೋಂಡವು ಮೊದಲು, ಬೇಯಿಸನ್ನವ ಜೊತೆಗೆ
ಮನ ಸರಿಯೆ! ಮನೆ ಶುಚಿಗೆ ಸಂದೀಪನೆ ಕೊನೆಗೆ

ಹರಟಿದೆವು, ಹಾಡಿದೆವು, ಕೂಡಿ ಕೈ ಹಾಕಿದೆವು
ಘಂಟೆ ಕಳೆಯಲು ಆಗ, ಸಂದೀಪನ ಕಳುಹಿದೆವು

ಹೊತ್ತಾಯ್ತು ಬರಲಿಲ್ಲ! ಪೇಚಿಗೆ ಸಿಲುಕಿದೆವು!
ನಡೆಯಿತಡುಗೆಯು ಮತ್ತೆ, ಮತ್ತಷ್ಟು ಮುಗಿಸಿದೆವು!

ಅರರೆ! ಅರರಿಯ ತೆರೆಯೆ, ಬಂದಿಹರು ಸುನೀಲ ಸಂಸಾರ!
ಜೊತೆಯವರ ಜೊತೆಯಲ್ಲೆ, ಕರುಣಿಸಿ ಅತಿಥಿ ಸತ್ಕಾರ,

’ರಸಬಾಳೆ’ ತಂಪೆರೆಯೆ, ಚೆಂಗನ್ನಡದ ಝೇಂಕಾರ
ಮನೆತುಂಬ ಹೊಸಕಾಂತಿ, ನಲವು-ಗೆಲವಿನ ಶ್ರೀಕಾರ!

ಹರೀಶರಾಗಮನ, ಕೊನೆಗೆ ಪಾಟೀಲನಾವರಣ!
ಆಗೆಂಬೆ ನಿಜದಲ್ಲೆ, ಸೊಗದ ಗಂಗಾವತರಣ!

ಮಾತಲೆಲ್ಲರ ಬೆರೆಯೆ, ಬೆಳಗಿತೆಲ್ಲರ ಹರಣ!
ತುಂಬಿ ಮನ ಹರಿದುಲಿಯೆ, ಗ್ಲಾನ ಮೌನಕೆ ಮರಣ!

ಮಾತು ಮುಗಿಯದು ನಮದು, ಹೊತ್ತಾಯಿತೆನ್ನುತ್ತ
ಔತಣದ ಉತ್ಸವದೆ ಜಿಗಿದು ನಿಂತೆವು ಸವಿಯುತ್ತ

ಸಂತೃಪ್ತಿ ನಮಗೆಲ್ಲ, ತಿನ್ನಲೆಲ್ಲರೂ ಮೆಚ್ಚುತ್ತ
’ಭಾವ ಚಿತ್ರ’ದಲಿ ನಾವೆಲ್ಲ, ಕಾಲ ಕಳೆಯಿತು ಮತ್ತ!

ಕಲ್ಲಂಗಡಿ ಸರಸವು, ಕೊಡುಗೆ ಸಂತನ ಜತ್ತ!
ಬೀಳ್ಕೊಡುಗೆ ಕೊನೆಯಲ್ಲಿ, ನಡೆದವುಬಾನಿನ ಅತ್ತ!

ದಾರಿಯಲಿ ನಗೆ ಬುಗ್ಗೆ, ನೆನಪು ಆರ್ಟೆಮೆಸ್ಸಿನ ಸುತ್ತ!
ಕಡಿಮೆಯೆನಿಸಿದು ಒಂದೆ, ಕಾಣದುದು ಗಂಜೀಪು ಗಮ್ಮತ್ತು!

                                                  ರಚನೆ: ’ಸಂತ’
                                                  ತಾರೀಖು: ೧೬/೦೭/೦೫

ಕವಿತೆ: ಭಾವ ಗೆಳತಿ

                     ಭಾವಗೆಳತಿ   
           
ನಿನ್ನ ಭಾವದ ಸಿರಿಯ ಬೆರಗಾದೆ ಕಂಡಿಂದು,
ಮೆಚ್ಚಿದೆನು ನಿನ್ನ ಗೆಳತಿ...ಓ...’ಭಾವ ಗೆಳತಿ’

ಬಾಂಧವ್ಯ ಬೇರಿನಲಿ, ಅಗಲಿಕೆಯ ನೋವಿನಲಿ
ನೆನಪಿನ ದೋಣಿಯಲಿ ತೇಲಿ ತಂದ...ನಿನ್ನ ಭಾವದ ಸಿರಿಯ...

ನೋವೇನೆ ನಗುವಿನಲಿ, ಅತಿವಿರಳ ಮನಸಿನಲಿ
ಎದೆವೀಣೆ ತಂತಿಯನು ಮೀಟಿ ತಂದ...ನಿನ್ನ ಭಾವದ ಸಿರಿಯ...

ಕಾವೇನೆ ಸಹನೆಯಲಿ, ಸರಳತೆಯ ಸೊಗಸಿನಲಿ
ಅನುರಾಗ ರವಿಛವಿಯು ಚಿಮ್ಮಿ ಬಂದ...ನಿನ್ನ ಭಾವದ ಸಿರಿಯ...

ಹಿರಿತನದ ಶೋಭೆಯಲಿ, ಸಹಜತೆಯ ಊರೆಯಲಿ
ಗೆಳೆತನದ ಸೊಗಸುಧೆಯ ತುಂಬಿ ಬಂದ...ನಿನ್ನ ಭಾವದ ಸಿರಿಯ...

ಜೀವನದ ಯಾತ್ರೆಯಲಿ, ಅನುಭವದ ಜಾತ್ರೆಯಲಿ
ಸಮರಸದ ಬೋಧೆಯಲಿ ಮೂಡಿ ನಿಂದ ... ನಿನ್ನ ಭಾವದ ಸಿರಿಯ ...

ನುಡಿ ನಮನ ಶರ್ಮದಲಿ, ಕರುವೆದೆಯ ಕರ್ಮದಲಿ
ಮನುಮನದ ಧರ್ಮದಲಿ ಬೆಳಗಿ ನಿಂದ...ನಿನ್ನ ಭಾವದ ಸಿರಿಯ...

                                                  ರಚನೆ - ’ಸಂತ’ (ಸ.ಗು.ಸಂತೋಷ್)
                                                  ತಾರೀಖು - ೧೫/೧೧/೦೫              

ಕವಿತೆ: ಅವಳು ಸತ್ತಾಗ

              
              ಅವಳು ಸತ್ತಾಗ!

ಇಂದು ಕೆಂದಾವರೆಯ ಮೊಗ ಚೆಲುವು ಬಾಡಿಹುದು
ನಲ್ಲನಗಲಿಕೆಯಿಂದ ತನುಮನವು ಮುದುಡಿಹುದು

ನಿತ್ಯ ಸಂತಸ ಭೇಟಿ, ಏಕಾಂತ ಕಂಡಿಹುದು
ಪ್ರೀತಿ ಸರಸದ ಮಾತು, ಮೌನವನು ತಳೆದಿಹುದು
ನಲುಮೆ ಒಲುಮೆಯ ತೋಟ, ಮಸಣದೆಡೆ ನಡೆದಿಹುದು
ಮಸಣದ ಹೂವಿವಳ ಬದುಕು ಬರಡಾಗಿಹುದು

ಮೆಚ್ಚಿ ಹಚ್ಚಿದ ಕನಸು ನೂರಾರು ಕರಗಿಹುದು
ಪ್ರೇಮ ಲೋಕದ ಸೊಗಸು ಕನಸಾಗೆ ಉಳಿದಿಹುದು
ಜೊತೆ ಕಳೆದ ಚಣವೆಲ್ಲ ನೆನಪಾಗಿ ಉರುಳಿಹುದು
ಉರುಳುರುಳಿ ನೆನಪೆಲ್ಲ ಇವಳ ಉರುಳಾಗಿಹುದು!

ಮೋಹ ಮಾಯಾ ಶಕ್ತಿ, ಅಗಲಿಕೆಯ ಸಂದಿಹುದು
ನೇಹ ಮಧು ತಣ್ಣೀರು, ಕಣ್ಣೀರು ಹನಿಸಿಹುದು
ಪ್ರೇಮ ಸುಧೆ ಪನ್ನೀರು, ನಂಜನ್ನು ಎರೆದಿಹುದು
ಅಗಲೆ ಅಗಲಿದ ಇವಳ ನೆನಪೊಂದೆ ಇನ್ನಿಹುದು!

                                    ರಚನೆ - "ಸಂತ"(ಸ.ಗು.ಸಂತೋಷ್)
                                    ತಾರೀಖು - ೦೮/೧೨/೦೫       

ಕವಿತೆ: ಬದುಕು


                     ಬದುಕು


ಬದುಕು ಮುಗಿಯದ ಪಾಠ, ದೇವನಾಡಿಸುವಾಟ
ಇರುಳು-ಬೆಳಕಿನ ಮಾಟ, ಜೀವ ಕೂಟ!
ಮನದ ತುಂಬೆಲ್ಲೆಡೆಯು, ನವರಸವು ಚಿಮ್ಮಿರಲು
ಬಳಿಗೆ ಸೆಳೆಯುತ್ತಲಿದೆ ಬಾಳ ಹೂಟ!

ಚೆಲುವು ತುಂಬಿದ ನಾಡು, ಬಯಲಾದ ಕಾಡು
ಖಗಮಿಗಗಳ ಪಾಡು?! ಹರಿಯೆ ನಯನ!
ಹರಿವ ನೀರಿನ ಸೊಬಗು, ’ಬರ’ದ ನೋವಿನ ಕೊರಗು
ನಾಡು ಸೇರಿದ ಕಡಲು, ಅರಿಯೆ ವರುಣ!

ಮೈತ್ರಿ, ಪ್ರೀತಿಯ ಸೊಗಸು, ದ್ವೇಷ ಕಾಮದ ಬಿರುಸು
ಬಿತ್ತ, ಹೊತ್ತ, ಕಿತ್ತ, ಮನದ ಸದನ!
ಸರಳ ಸಂಯಮ ಬದುಕು, ಮರುಳ ಮುನಿಯನ ದುಡುಕು
ವಿತ್ತವ್ಯೂಹದ ಸುತ್ತ, ಕುಣಿವ ಕದನ!

ತುಂಬಿ ತುಳುಕಿದ ತೇಗು, ಅನ್ನ ಮಾಡಿಗೆ ಬಾಗು
ನಭವನೇರಿದ ಕೂಗು, ಹೊತ್ತ ಕರ್ಣ!
ಇರಲರಿವೆಯ ಹರಿವ, ಹರಿದರಿವೆಯ ಹೊಲಿವ
ಬೆತ್ತಲೊಡಲಿನ ನೋಟ, ಬಾಳ ವರ್ಣ!

ಬಣ್ಣ ಬಣ್ಣದ ಕನಸು, ತುಂಬಿ ಕಾಣದ ಸೊಗಸು
ಜಿಗಿದು ಜಾರುತ್ತಲಿದೆ ಮೆಲ್ಲ ಹರಣ!
ಸೃಷ್ಟಿ ನೀಡಿದ ವರವು, ತೃಪ್ತಿ ಕಾಣದ ಮನವು
ಧನದೆ ಹಮ್ಮುಕ್ಕುತಿರೆ ಇಲ್ಲೆ ಮಸಣ!

ಮನುಜ ಸೃಷ್ಟಿಯ ತಂತ್ರ, ಜೀವಜಾತ್ರೆಯ ಯಂತ್ರ
ಭಾವಭವಭೇದಗಳು, ಇಲ್ಲಿ ಸಹಜ!
ಜನನ-ಮರಣದ ತೀರ, ಏಳು-ಬೀಳಿನ ಪೂರ
ನಡೆಸುವಾತನ ನಂಬಿ, ಸಾಗು ಅನುಜ!

                                 ರಚನೆ: ’ಸಂತ’
                                 ತಾರೀಖು: ೦೯/೦೮/೦೫

ಹೂಟ - ಏರ್ಪಾಟು

ಕವಿತೆ: ವರ್ಷದ ಹರ್ಷ

                 ವರ್ಷದ ಹರ್ಷ

ಪುಟ್ಟ, ಪುಟ್ಟ ಹೆಜ್ಜೆ  ಇಡುತಿಹ ಎನಗೆ ಒಂದು ವರ್ಷ
ಹಿಗ್ಗಿ ಹಿಗ್ಗಿ ನಲಿದು ನಗುತಿರೆ ನೀವು ಏನೊ ಹರುಷ

ವಿಸ್ಮಯದ ಜಗ ಒಳಗೆ, ಅಂತೆಯೆ ಹೊರಗೆ
ಅನುಚಣವು ಬೆರಗಿನಲೆ‌ ಎವೆ ಮುಚ್ಚದೆ
ಕೈಗೆ ಎಟುಕದೆ, ಕಣ್ಗೆ ಕಾಣದೆ ಎಣಿಕೆ ತಪ್ಪಿದೆ
ಬೆಚ್ಚಿ, ಮೆಚ್ಚಿ ಹೊಸತು ಎಲ್ಲ ಸೊಗಸನೊಪ್ಪಿದೆ!

ಸುಸ್ಮಿತರೆ ಜಗ ತುಂಬ, ನನ್ನದೇ ಬಿಂಬ
ಅನುಗಾಲ ಸಂತಸದೆ ನಗು ನಟ್ಟಿದೆ
ಮುದವ ಕಾಣುತೆ, ಮನವ ಕುಣಿಸುತೆ ತಾಳ ಸಿಕ್ಕಿದೆ!
ನಲಿಸಿ ತಣಿಸಿ ಸುಖವೆ ಎಲ್ಲ ಹಿರಿಮೆ ಹೆಚ್ಚಿದೆ

ತನ್ಮಯತೆ ಜಗದಲ್ಲಿ, ಕೌತುಕವೆ ಎಲ್ಲ
ಅಪ್ಪಿ ಮುದ್ದಾಡುವರು ಹಿತವೆನಿಸಿದೆ
ಕನಸು ಸುಮಧುರ, ಬದುಕು ಸುಂದರ, ಶ್ರುತಿ ಸೇರಿದೆ
ಮುದ್ದು ಪ್ರೀತಿ ಸವಿಯಿದೆಲ್ಲ! ಸಗ್ಗ ತೋರಿದೆ!

ರಚನೆ: "ಸಂತ" (ಸ.ಗು ಸಂತೋಷ)
ತಾರೀಖು - ೨೦/೦೫/೨೦೧೭

ಕವಿತೆ: ಜೋಗುಳ

                     ಜೋಗುಳ

ಜೋಗುಳದ ಜೇನೆರೆವ ತಾಯಿಯ ಮಡಿಲಲ್ಲಿ
ಬೆಚ್ಚನೆಯ ಅಪ್ಪುಗೆಯ ಅಗ್ಗಳದ ಸುಖದಲ್ಲಿ
ಅರಳುತಲಿ ಮುಖ ಕಮಲ ಚಿಮ್ಮಿಸುತ ಆನಂದ
ಪವಡಿಸಿಹ ಹಸುಕಂದ, ನೋಡಲು ಬಲು ಚಂದ

ನಲಿದು ಎಳೆ ಹೂ ಮನಸು, ಬಿರಿದ ಮಲ್ಲಿಗೆ ಸೊಗಸು
ಎಲ್ಲೆಡೆಯು ನರುಗಂಪು, ಎಲ್ಲರೆದೆ ಮನ ತಂಪು
ಲವಲೇಶದ ಕ್ಲೇಶ ಇರದ ಧನ್ಯತೆ ಭಾವ
ನಿರ್ಮಲಾ, ಸುಶಾಂತ, ಹಗುರವಾಯಿತು ಜೀವ!

ಇಲ್ಲ ಸೋಗಿನ ಆಟ! ಬಾಳ ಎಗ್ಗಿನ ಓಟ!
ಬಡವ ಬಲ್ಲಿದ ಭೇದ ಎಲ್ಲ ಮೀರಿದ ಮಾಟ!
ಒಲವೆರೆದು, ಹಾಲುಣಿಸಿ, ತಂದಾನ ತಾನಾನ
ಸವಿರುಚಿಯ ಸಿಹಿಪಾಕ, ನವ್ಯ ವಿಸ್ಮಯ ಲೋಕ!

ಮೂಕ ವಿಸ್ಮಿತ ಎಲ್ಲ, ಬೆರಗು, ಮೆಚ್ಚುಗೆ, ಹೆಮ್ಮೆ
ಹೀಗಾಗುವುದು ಸಹಜ, ತೋರೆ ನಾಕ ಒಮ್ಮೊಮ್ಮೆ!
ಬೇಕೆನಿಸುವುದು ಆ ಸುಖವು ಬಾಳಲ್ಲಿ ಮತ್ತೊಮ್ಮೆ
ಯಾರು ಬಲ್ಲರು ಅದನು, ಲಭ್ಯವೇ ಇನ್ನೊಮ್ಮೆ?!

ರಚನೆ - ’ಸಂತ’ (ಸಖರಾಯಪಟ್ಟಣ)
ತಾರೀಖು - ೧೪/೦೭/೧೫

Sunday, June 10, 2018

ಕವಿತೆ: ಹೆಗ್ಗಾಲಿಯಲಿ ತೇಲಿ


              ಹೆಗ್ಗಾಲಿಯಲಿ ತೇಲಿ....                                                               
ಸ್ನೇಹಿತನ ಕೂಡಿ ಹೆಗ್ಗಾಲಿಯಲ್ಲಿ                         
ಬಂದಂತೆ ಬಾಳಲ್ಲಿ ನವ ಚೈತ್ರ ಜೋಗ
ಬಾನತ್ತ ಜಿಗಿದು, ಮನ ಹಿಗ್ಗಿ ತೇಲಿ                          ಮುಗಿಲೇರಿ ಮನಸು, ಕಂಡಿರದ ಕನಸು!

ಉಲ್ಲಾಸ, ಉತ್ಸಾಹ, ಪುಟಿಪುಟಿದು ಚಿಮ್ಮಿ            ದೊರೆತಂತೆ ಓಟಕ್ಕೆ ಕೋಲ್ಮಿಂಚು ವೇಗ
ಅನರ್ಘ್ಯ ಸಂತೋಷ, ಅನನ್ಯ ಸಂಗೀತ!             
ರಂಗೇರಿ ಕನಸೆಲ್ಲ ಎಲ್ಲಿರದ ಸೊಗಸು!
                                                               
ಸುಳಿಸುಳಿದು ಮೆರೆದಂತೆ ಋತುಗಾನ ಯೋಗ            ಸುಶಾಂತ, ನಿಶ್ಚಿಂತ, ಮನ ದಿವ್ಯ ತೋಟ
ಕಡಲಾಳ ಮನಸು, ಹೊನ್ನೆನಪ ಬಳಸು                     
ಎಳೆ ಮೊಗದ ತುಂಬೆಲ್ಲ ತಿಳಿ ಮಂದಹಾಸ

ಹೊಳೆಹೊಳೆದು ಮೈದಳೆದು ಹದಗೊಂಡ ರಾಗ        ಮುನ್ನೋಟ, ಹಿನ್ನೋಟ ಅತಿ ರಮ್ಯ ತೋಟ
ಹಾಡಾಗಿ ಬಳಸೆಲ್ಲ, ನವಭಾವ ಸೊಗಸು!                    ಮೆರೆಯುವುದು ಅನವರತ ನಿಲ್ಲದಿರೆ ಅವನಾಟ!

ರಚನೆ - ’ಸಂತ’ (ಸ.ಗು.ಸಂತೋಷ್)
ತಾರೀಖು - ೦೧/೦೬/೧೫

ಕವಿತೆ: ಕಾಣದ ಗೋಕುಲ

            ಕಾಣದ ಗೋಕುಲ!

ಅರರೆ! ಭಿತ್ತಿ ಆಚೆಗಿಹ ಮನುಜರಿವರಾರು?
ತಣ್ಣಗೆ ನಿಂತಿಹರೆ ಇವರು! ಅಚಲ! ನಿಶ್ಚಲ!
ನೆಚ್ಚಿ ಒಪ್ಪಿದ ಮಳಿಗೆ, ಇಲ್ಲ ಬಿಸಿಲಿನ ಬೇಗೆ
ಕಾಣಿಸದೆ, ಕೇಳಿಸದೆ ಇದೇನು ನಿರ್ಭಾವ, ಇವರಿಗಿಲ್ಲವೆ ಜೀವ?

ಅರೆಹೊಟ್ಟೆಯಲಿ ಬೆಂದು ಸೋಲುತಿಹ ದನಿಗೆ
ಸೊಪ್ಪು-ಸೆದೆ ಅರಸುತ್ತ ಅಡ್ಡಾಡುತಿಹ ನಮಗೆ
ನೀರ ಸೆಲೆ ತೋರೀತೆ? ಉಣಿಸಿ ತಣಿಸುವವರಾರು?
ಹಸಿರ ನೆಲೆ ಇದ್ದೀತೆ? ಹಾದಿ ತೋರುವವರಾರು?

ಮೂವತ್ತು ಮೂರು ಕೋಟಿ ದೇವರುಗಳು ನಿನ್ನೊಳಗೆ
"ಕಾಮಧೇನು"ವೆ ನೀನು, ತಾಯಿ ನಮೆಲ್ಲರಿಗೆ
ಎಂದೆನುತ ಹಾಡಿ, ಬಾಗಿ ಕರ ಮುಗಿದು ಬೇಡಿ
ಭಯ ಭಕ್ತಿಯಲಿ ಬೆಳೆದ ಮನುಜನ ಸದಾಚಾರ!

ಎಲ್ಲಿ ಹೋಯಿತೊ ಏನೊ! ಏಕೆ ಕರಗಿತೊ ಏನೊ!
ದಟ್ಟ ಕಾನನವಿಲ್ಲ, ಹರಿವ ತೊರೆ-ಝರಿಯಿಲ್ಲ
ಬನಸಿರಿಯ ಸೊಬಗಿಲ್ಲ, ಮಲೆನಾಡ ಸೊಗಸಿಲ್ಲ!
ಇಲ್ಲವಾಗಿದೆಯಲ್ಲ ನಾವು ನೆಚ್ಚಿದ ಗೋಕುಲ

ಏನೂ ತೋಚದು! ಏನಿದೀ ಗ್ರಹಚಾರ!!
ಬದಲಾದ ಮನುಜನ ಆಚಾರ-ವಿಚಾರ
ಹಸಿರಿಲ್ಲ, ಉಸಿರಿಲ್ಲ; ವಿಚಿತ್ರ, ವಿಕಾರ!
ಎಲ್ಲೆಲ್ಲೂ ಮಳಿಗೆ-ಮಹಲುಗಳು ಬೃಹದಾಕಾರ!

ರಚನೆ - ’ಸಂತ’ (ಸ.ಗು.ಸಂತೋಷ್)
ತಾರೀಖು - ೩೧/೦೫/೧೫

ಕವಿತೆ: ಅಣ್ಣ-ತಂಗಿ

"ಅಣ್ಣ-ತಂಗಿ"

ಉದಯವಾಯಿತು ಇಂದು ಹೊಸತು ಬಾಳಲಿ ನಂಟು
"ಅಣ್ಣ-ತಂಗಿ"ಯ ಚೆಲುವ ಗೆಲುವು ಬೆಸೆಯುವ ಗಂಟು
ಕನಕು ನಿಲುಕದ ಭಾವ ಅರಳಿ ವ್ಯಾಪಿಸಿ ಇಂತು
ದಿವ್ಯ ಬಾಳಿನ ನಭಕೆ ಪೂರ್ಣ ಚಂದ್ರಮ ಬಂತು

ಹುಟ್ಟಿನೊಂದಿಗೆ ಬಂದ ಎನಿತೊ ಕರಗಿವೆ ನಂಟು
ಬದುಕಿನೊಂದಿಗೆ ಹುಟ್ಟಿ ಎನಿತೊ ಬೆಸೆದಿವೆ ಗಂಟು
ನೇಹ ಪ್ರೇಮದ ಪಥದಿ ನಂಟು ನೂತನ ಇಂತು
ಭವ್ಯ ಲೋಕವ ಸೃಜಿಸೆ ಸಗ್ಗ ಸಂಭ್ರಮ ಬಂತು

ಮರ್ತ್ಯ ಲೋಕದಿ ಬೆಳೆವ ವಿರಳ ಜೀವದ ನಂಟು
ಸರಳ ಜೀವಕೆ ಒಲಿವ ಬ್ರಹ್ಮ ಬೆಸೆಯುವ ಗಂಟು
'ಸಂತ' ಸಜ್ಜನ ಮನದ ಭಾವ ಪಲ್ಲವ ಇಂತು
ನವ್ಯ ಅಚ್ಚರಿ ಹನಿಸೆ ಕವನ ಚಿಮ್ಮುತ ಬಂತು

ರಚನೆ - 'ಸಂತ' (ಸ.ಗು.ಸಂತೋಷ್)
ತಾರೀಖು - ೧೬/೧೨/೨೦೦೮

Saturday, June 9, 2018

ಕವಿತೆ: ನೇಪಥ್ಯ

                    ನೇಪಥ್ಯ

ಜನುಮ ನೀಡುವೆವು, ಸಾಕಿ ಸಲಹುವೆವು
ನಮ್ಮನ್ನೆ ಸವೆಸಿ, ಅವರನ್ನು ಬೆಳೆಸಿ
ಒಲವ ಎರೆಯುವೆವು, ನಲಿಸಿ ನಲಿಯುವೆವು
ಸಂತಸವ ಅರಸಿ, ಸಂಭ್ರಮವ ಬಯಸಿ

ಅಣುಅಣುವು ಅನರಣಿಸಿ "ಋಣಧರ್ಮ" ಎಂದು
ಎನಿಸಿತ್ತು ನಮಗಿವರೆ ಎಂದಿಗೂ ಇಂಬು
ದಿನವುರುಳಿ, ಉರುಳುರುಳಿ ಅನುಕ್ಷಣವು ಇಂದು
ಇರಿಯುತಿದೆ, ಕೊರೆಯುತಿದೆ ಅರ್ಧಸತ್ಯದ ಅಂಬು

ಸಿರಿಭೋಗ ಬರಲಾಗಿ ದೂರವಾದೆವೆ ನಾವು?
ಜಡ ಮುಪ್ಪು ಆವರಿಸೆ ಬೇಡವಾದೆವೆ ನಾವು?
ಇಳಿಸಂಜೆ ಹೊತ್ತಹುದು! ಕತ್ತಲೇತಕೆ ಹೀಗೆ!
ಸೀಳಿ ಇರುಳಿನ ಬಸಿರ ಬೆಳಕು ಬರುವುದೆ ಹೇಗೆ?!

ನಮಗಾಗಿ, ಅವರಿಗೆನೆ ಕಂಡುದೆಷ್ಟೋ ಕನಸು
ತೋರಿದವು ಇಂತಿಷ್ಟು, ಗಾಳಿಗೋಪುರ ಸೊಗಸು!
ಮಿತಿಯುಂಟು ಎಲ್ಲವುಕು ಅರಿತವೀ ಸತ್ಯ
ಮರೆಯುವುದು, ಒಪ್ಪುವುದು, ಮೌನವದೆ ಪಥ್ಯ!

ಬಾಳೊಂದು ನಟರಂಗ, ವಿಧಿ ವರ್ಣಚಿತ್ರ
ನಮಗಿಲ್ಲಾವ ಪಾತ್ರ ಅದರದೇ ಸೂತ್ರ!
ಮುಂದೆಮಗೆ ಹಿನ್ನೋಟ ಅದರದೆ ಸಖ್ಯ
ಇನ್ನವರೆ ಮುಂದೆಲ್ಲ,  ನಮದು ನೇಪಥ್ಯ

ರಚನೆ: "ಸಂತ" (ಸ.ಗು ಸಂತೋಷ)
ತಾರೀಖು: ೨೨/೦೭/೨೦೧೭

Sunday, June 3, 2018

ಕವಿತೆ: ಸವಿಸವಿನೆನಪು




                       "ಸವಿಸವಿನೆನಪು"


ಎಲ್ಲೋ  ಜಾರಿದೆ ಮನಸು,ನೆನೆಯುತ್ತ ಹಳೆ ಸೊಗಸು,
ಇಂದಿಗೆಲ್ಲವೂ ಕನಸು! ಆಗಬಹುದೇ ಕೆಲ ನನಸು!

ಆವ ಬಂಧನ ಇರದೆ, ಹಗುರ, ಹೂಮನ ಹಕ್ಕಿ 
ಎಂತದೋ ಉಲಿಯುತ್ತ, ಬಾನೆಡೆಗೆ ಜಿಗಿಯುತ್ತ, 
ಬಂದಂತೆ ಹಾರುತ್ತ, ಸ್ಚಚ್ಛಂದ! ಚಂದನದ ಸೊಗಸು!

ಆವ ಕ್ಲೇಶವು ಇರದೆ, ಮೈತ್ರಿ ಮಲ್ಲಿಗೆ ಕಂಪು 
ಇದ್ದಲ್ಲಿ ಘಮಿಸುತ್ತ, ಹೋದಲ್ಲಿ ಹರಡುತ್ತ
ಸಂಪ್ರೀತಿ ಹರಿಸುತ್ತ,ಅಭಿಮಾನ, ಅಕ್ಕರೆಯ ತಂಪು 

ಆವ ಕರ್ಕಶ  ಇರದೆ, ಮಧುರ ಮಂಜುಳ ಗಾನ 
ಇಂಪನ್ನು ತುಂಬುತ್ತ, ನವಚೇತ ಸ್ಫುರಿಸುತ್ತ
ಎತ್ತಲೋ ಒಯ್ಯುತ್ತ, ಉನ್ಮಾದ, ಉಲ್ಲಾಸದ ಯಾನ!

ರಚನೆ - ಸಂತೋಷ್. ಎಸ್.ಜಿ
ತಾರೀಖು - 12/05/16

ಪ್ರೇರಣೆ: Remembering good old times with Nrupatunga friends

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...